ಹಿಂಸಾಚಾರಕ್ಕೆ ನಲುಗಿರುವ ಮಣಿಪುರಕ್ಕೆ (Manipur Violence) ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಭೇಟಿ ಕೊಟ್ಟಿದ್ದಾರೆ. ಇಂದು ಮತ್ತು ನಾಳೆ (ಜೂ.29-30) ಅವರು ಮಣಿಪುರ ಪ್ರವಾಸ (Rahul Gandhi Manipur Visit) ಹಮ್ಮಿಕೊಂಡಿದ್ದಾರೆ. ಮಣಿಪುರದಲ್ಲಿ ಸಂಘರ್ಷದಿಂದ ತೊಂದರೆಗೆ ಒಳಗಾಗಿರುವ, ಸಂಕಷ್ಟಕ್ಕೀಡಾಗಿರುವ ಸಮುದಾಯಗಳ ನೆರವಿಗೆ ನಿಲ್ಲುವ, ಅವರಿಗೆ ಧೈರ್ಯ ಹೇಳುವ ಉದ್ದೇಶ ಇಟ್ಟುಕೊಂಡು ರಾಹುಲ್ ಗಾಂಧಿ (Rahul Gandhi) ಮತ್ತು ಇತರ ಕಾಂಗ್ರೆಸ್ ನಾಯಕರು ಇಂದು ಮಣಿಪುರಕ್ಕೆ ಕಾಲಿಟ್ಟಿದ್ದಾರೆ. ಹಿಂಸಾಚಾರದಿಂದ ಮನೆ ಕಳೆದುಕೊಂಡು, ಅನೇಕರು ಆಶ್ರಯ ಶಿಬಿರ ಸೇರಿದ್ದಾರೆ. ಇಂಫಾಲ್ ಮತ್ತು ಚುರ್ಚಾಂದ್ಪುರದಲ್ಲಿ ತೆರೆಯಲಾದ ಆಶ್ರಯ ಶಿಬಿರಗಳಿಗೆ ರಾಹುಲ್ ಗಾಂಧಿ ಭೇಟಿ ಕೊಡುವ ಯೋಜನೆ ಹಾಕಿದ್ದಾರೆ.
ಆರಂಭದಲ್ಲೇ ವಿಘ್ನ!
ರಾಹುಲ್ ಗಾಂಧಿಯವರು ಇಂಫಾಲ್ ತಲುಪಿದರು. ಆದರೆ ಅಲ್ಲಿಂದ ಚುರ್ಚಾಂದ್ಪುರಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 20 ಕಿಮೀ ದೂರ ಚಲಿಸಿದ ನಂತರ ಬಿಷ್ಣುಪುರ ಎಂಬಲ್ಲಿ ರಾಹುಲ್ ಗಾಂಧಿಯನ್ನು ಮಣಿಪುರ ಪೊಲೀಸರು ತಡೆದಿದ್ದಾರೆ. ಈ ಮಾರ್ಗದಲ್ಲಿ ಉಟ್ಲೋ ಎಂಬ ಗ್ರಾಮದ ಬಳಿ ಪ್ರತಿಭಟನೆ ನಡೆಯುತ್ತಿದೆ. ಟೈಯರ್ಗಳನ್ನು ಸುಡಲಾಗುತ್ತಿದೆ. ಭದ್ರತೆ ದೃಷ್ಟಿಯಿಂದ ರಾಹುಲ್ ಗಾಂಧಿಯವರನ್ನು ನಾವು ಬಿಡುತ್ತಿಲ್ಲ. ರಾಹುಲ್ ಗಾಂಧಿಯವರನ್ನು ಈ ಮಾರ್ಗದಲ್ಲಿ ಸಂಚರಿಸಲು ಬಿಡಬೇಕೋ, ಬೇಡವೋ ಎಂಬ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನಮಗಿಲ್ಲ. ನಮಗೆ ರಾಹುಲ್ ಗಾಂಧಿ ಭದ್ರತೆ ಬಗ್ಗೆ ಕಳವಳ ಇದೆ’ ಎಂದು ಅಲ್ಲಿ ನಿಯೋಜಿತಗೊಂಡಿರುವ ಪೊಲೀಸರು ತಿಳಿಸಿದ್ದಾರೆ.
ಕೆ.ಸಿ.ವೇಣುಗೋಪಾಲ್ ಅಸಮಾಧಾನ
ರಾಹುಲ್ ಗಾಂಧಿ ಕಾರನ್ನು ಮಣಿಪುರ ಪೊಲೀಸರು ಹೀಗೆ ಬಿಷ್ಣುಪುರದಲ್ಲಿ ತಡೆದು ನಿಲ್ಲಿಸಿದ್ದಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರಾಹುಲ್ ಗಾಂಧಿಯವರನ್ನು ಪೊಲೀಸರು ಯಾಕೆ ತಡೆದರು ಎಂದು ಅರ್ಥವಾಗುತ್ತಿಲ್ಲ. ಕೇಳಿದರೆ, ನಮಗೆ ಆ ಅಧಿಕಾರ ಇಲ್ಲ ಎನ್ನುತ್ತಾರೆ. ಈ ಮಾರ್ಗದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಜನರು ನಿಂತು, ರಾಹುಲ್ ಗಾಂಧಿಯತ್ತ ಕೈಬೀಸುತ್ತಿದ್ದರು. ಅವರೆಲ್ಲ ರಾಹುಲ್ ಗಾಂಧಿಯವರ ಆಗಮನವನ್ನು ಸಂಪೂರ್ಣವಾಗಿ ಸ್ವಾಗತಿಸಿದ್ದರು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿಯಂತ್ರಣಕ್ಕೆ ಬಾರದ ಮಣಿಪುರ ಹಿಂಸಾಚಾರ; ಮತ್ತೆ ಫೈರಿಂಗ್, 24 ಗಂಟೆಯಲ್ಲಿ 9 ಜನರ ಸಾವು
ಬಿಜೆಪಿ ಕಿಡಿ
ರಾಹುಲ್ ಗಾಂಧಿಯವರು ಚುರ್ಚಾಂದ್ಪುರಕ್ಕೆ ತೆರಳಲು ಒಂದು ಚಾಪರ್ ಸಿದ್ಧವಾಗಿತ್ತು. ಆದರೆ ರಾಹುಲ್ ಗಾಂಧಿ ಅದರ ಮೂಲಕ ಹೋಗಲು ನಿರಾಕರಿಸಿದರು. ರಸ್ತೆ ಮಾರ್ಗದ ಮೂಲಕವೇ ಹೋಗುವುದಾಗಿ ಹೇಳಿದರು. ಸುರಕ್ಷತೆ ದೃಷ್ಟಿಯಿಂದ ಪೊಲೀಸರು ರಾಹುಲ್ ಗಾಂಧಿಯನ್ನು ತಡೆದಿದ್ದಾರೆ. ಈಗಲೂ ಅವರು ಹೆಲಿಕಾಪ್ಟರ್ ಮೂಲಕ ಚುರ್ಚಾಂದ್ಪುರ ತಲುಪಬಹುದು ಎಂದು ಬಿಜೆಪಿ ಹೇಳಿದೆ.