ಭೋಪಾಲ್: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶ ಮಾಜಿ ಸಚಿವ ರಾಜಾ ಪಟೇರಿಯಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ, ದ್ವೇಷಯುಕ್ತ ಭಾಷಣ ಮಾಡಿದ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಅವರ ಭಾಷಣದ ವಿಡಿಯೊ ವೈರಲ್ ಆಗಿದೆ.
ಪನ್ನಾ ಜಿಲ್ಲೆಯ ಪೋವಾಯಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ರಾಜಾ ಪಟೇರಿಯಾ, ‘ನರೇಂದ್ರ ಮೋದಿಯವರು ಒಂದು ದಿನ ಚುನಾವಣೆಗಳೇ ಇಲ್ಲದಂತೆ ಮಾಡುತ್ತಾರೆ. ಈ ದೇಶವನ್ನು ಖಂಡಿತ ಒಂದಲ್ಲ ಒಂದು ದಿನ ಧರ್ಮ, ಜಾತಿ, ಭಾಷೆಗಳ ಆಧಾರದ ಮೇಲೆ ಒಡೆಯುತ್ತಾರೆ. ಇಲ್ಲಿನ ದಲಿತರು, ಬುಡಕಟ್ಟು ಜನಾಂಗದವರು, ಅಲ್ಪಸಂಖ್ಯಾತರ ಭವಿಷ್ಯ ತುಂಬ ಅಪಾಯದಲ್ಲಿದೆ. ನೀವು ಸಂವಿಧಾನ ಉಳಿಸಬೇಕು ಎಂದರೆ, ಪ್ರಧಾನಿ ಮೋದಿಯವರನ್ನು ಕೊಲ್ಲಲು ಸಿದ್ಧರಾಗಬೇಕು ಎಂದು ಹೇಳಿದ್ದನ್ನು ವಿಡಿಯೊದಲ್ಲಿ ಕೇಳಬಹುದು. ‘ಇಲ್ಲಿ ಮೋದಿಯವರನ್ನು ಕೊಲ್ಲುವುದು ಅಂದರೆ ಅವರನ್ನು ಸೋಲಿಸುವುದು’ ಎಂದು ಅವರು ತಕ್ಷಣವೇ ಸ್ಪಷ್ಟಪಡಿಸಿದ್ದರೂ, ಅವರ ಈ ಮಾತುಗಳು ವಿವಾದ ಸೃಷ್ಟಿಸಿವೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ. ಮಾಜಿ ಸಚಿವ ರಾಜಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪನ್ನಾ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಅದರಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಮಧ್ಯೆ ವಿವಾದ ಸೃಷ್ಟಿಯಾಗುತ್ತಿದ್ದಂತೆ ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದ್ದ ರಾಜಾ ಪಟೇರಿಯಾ, ‘ನಾನು ಗಾಂಧೀಜಿ ಅವರ ಅನುಯಾಯಿ. ಗಾಂಧಿ ಫಾಲೋವರ್ಸ್ ಯಾರೂ ಹತ್ಯೆಯ ಬಗ್ಗೆ ಮಾತನಾಡುವುದಿಲ್ಲ. ಆ ವಿಡಿಯೊವನ್ನೇ ತಪ್ಪಾಗಿ ಬಿಂಬಿಸಲಾಗಿದೆ. ಪೂರ್ತಿ ವಿಡಿಯೊವನ್ನು ಪ್ರಸಾರ ಮಾಡಿಲ್ಲ’ ಎಂದು ಹೇಳಿದ್ದಾರೆ. ಇನ್ನು ರಾಜಾ ಹೇಳಿಕೆಯಿಂದ ಕಾಂಗ್ರೆಸ್ ವರಿಷ್ಠರು ಅಂತರ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ Kill Modi | ಸಂವಿಧಾನ ಉಳಿಸಲು ಮೋದಿಯನ್ನು ಕೊಂದುಬಿಡಿ ಎಂದ ಕಾಂಗ್ರೆಸ್ ನಾಯಕ, ಭುಗಿಲೆದ್ದ ಆಕ್ರೋಶ