ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಶಶಿ ತರೂರ್, ಅದಾದ ಕೆಲವೇ ಹೊತ್ತಲ್ಲಿ ವಿವಾದ ಹುಟ್ಟುಹಾಕಿದ್ದಾರೆ. ತಮ್ಮ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಶಶಿ ತರೂರ್ ಆ ಪ್ರಣಾಳಿಕೆ ಪುಸ್ತಕದ ಎರಡನೇ ಪುಟದಲ್ಲಿ ಒಂದು ಎಡವಟ್ಟು ಮಾಡಿದ್ದರು. ಅದನ್ನವರು ಒಂದು ತಾಸಿನಲ್ಲಿ ಸರಿಪಡಿಸಿಕೊಂಡರೂ ಕೂಡ ಅನೇಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಶಶಿ ತರೂರ್ ಬಿಡುಗಡೆ ಮಾಡಿದ ‘Think Tomorrow, Think Tharoor’ ಎಂಬ ಹೆಸರಿನ ಚುನಾವಣಾ ಪ್ರಣಾಳಿಕೆಯ ಪುಸ್ತಕದಲ್ಲಿ ಭಾರತದ ನಕಷೆಯೊಂದಿದೆ. ಆ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳನ್ನೇ ಚಿತ್ರಿಸಿರಲಿಲ್ಲ. ಇವೆರಡೂ ಪ್ರದೇಶಗಳು ಇಲ್ಲದ ಭಾರತದ ಚಿತ್ರ ಅದಾಗಿತ್ತು. ಭಾರತವನ್ನು ಅಸಂಬದ್ಧವಾಗಿ ಚಿತ್ರಿಸಿರುವ ಈ ಪ್ರಣಾಳಿಕೆಯನ್ನು ಅವರು ಟ್ವಿಟರ್ನಲ್ಲಿ ಶೇರ್ ಮಾಡುತ್ತಿದ್ದಂತೆ ಅನೇಕಾನೇಕರು ಶಶಿ ತರೂರ್ ವಿರುದ್ಧ ಕಿಡಿಕಾರಿದ್ದರು. ‘ಶಶಿ ತರೂರ್ ಒಬ್ಬ ದೇಶ ವಿಭಜಕ’ ‘ನಾಚಿಕೆ ಇಲ್ಲದವನು’ ಎಂಬಿತ್ಯಾದಿ ಕಮೆಂಟ್ಗಳನ್ನು ಮಾಡಿದ್ದರು.
ಹೀಗೆ ಚಿತ್ರಿಸಲಾದ ಭಾರತದ ನಕ್ಷೆಯ ಬಗ್ಗೆ ಅನೇಕಾನೇಕರು ಅಸಮಾಧಾನ ಹೊರಹಾಕಿ, ಬೈಯ್ಯುತ್ತಿದ್ದಂತೆ ಶಶಿ ತರೂರ್ ಕಚೇರಿ ತಪ್ಪು ತಿದ್ದಿಕೊಂಡಿದೆ. ಭಾರತವನ್ನು ಸಂಪೂರ್ಣವಾಗಿ ಚಿತ್ರಿಸಿ ಅಂದರೆ, ಬಿಟ್ಟು ಹೋದ ಜಮ್ಮು-ಕಾಶ್ಮೀರ, ಲಡಾಖ್ನ್ನೂ ಸೇರಿಸಿದ ಹೊಸ ನಕ್ಷೆಯುಳ್ಳ ಪರಿಷ್ಕೃತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಇದೇ ಮೊದಲಲ್ಲ !
ಶಶಿ ತರೂರ್ ಭಾರತದ ನಕ್ಷೆ ವಿಚಾರದಲ್ಲಿ ಎಡವುತ್ತಿರುವುದು ಇದೇ ಮೊದಲೇನೂ ಅಲ್ಲ. 2019ರಲ್ಲೂ ಇಂಥದ್ದೇ ಒಂದು ಮಹಾನ್ ಎಡವಟ್ಟು ಮಾಡಿದ್ದರು. ಆಗ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿತ್ತು. ಕೇರಳದ ಕೊಯಿಕ್ಕೊಡ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಶಿ ತರೂರ್ ಅದರ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಳ್ಳುವ ವೇಳೆ ಭಾರತದ ಚಿತ್ರವನ್ನೂ ಹಂಚಿಕೊಂಡಿದ್ದರು. ಆಗ ಅವರು ಶೇರ್ ಮಾಡಿಕೊಂಡಿದ್ದ ಭಾರತದ ನಕ್ಷೆಯಲ್ಲೂ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳು ಇರಲಿಲ್ಲ. ಆಗಂತೂ ಶಶಿ ತರೂರ್ ಸಿಕ್ಕಾಪಟೆ ಟ್ರೋಲ್ ಆಗಿದ್ದರು. ಹಲವರು ಛೀಮಾರಿ ಹಾಕಿದ್ದರು.
ಇದನ್ನೂ ಓದಿ: Congress President | ಅಧ್ಯಕ್ಷ ರೇಸ್‌ನಿಂದ ಗೆಹ್ಲೋಟ್ ಔಟ್, ತರೂರ್, ಬನ್ಸಾಲ್ ಇನ್