ನವ ದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ, ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಆರೋಗ್ಯದಲ್ಲಿ ಇಂದು ಏರುಪೇರಾಗಿದ್ದು, ಅವರನ್ನು ದೆಹಲಿಯ ಶ್ರೀಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದೆ. ಸೋನಿಯಾ ಗಾಂಧಿಯವರ ಶ್ವಾಸಕೋಶದಲ್ಲಿ ಸೋಂಕು ಉಂಟಾಗಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಪಕ್ಷ ತಿಳಿಸಿದೆ. ಹಾಗೇ, ಸೋನಿಯಾ ಗಾಂಧಿಯವರೊಟ್ಟಿಗೆ ಅವರ ಪುತ್ರಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇದ್ದಾರೆ.
ಸೋನಿಯಾ ಗಾಂಧಿಯವರ ಆರೋಗ್ಯ ಮಂಗಳವಾರದಿಂದಲೂ ಸರಿಯಾಗಿಲ್ಲ. ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಪ್ರಾರಂಭವಾದ ನಂತರ ಇತ್ತ ಸೋನಿಯಾ ಗಾಂಧಿ ಆರೋಗ್ಯ ಸರಿಯಿಲ್ಲ ಎಂಬ ವಿಷಯ ಗೊತ್ತಾಯಿತು. ಹಾಗಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಕೇವಲ 7 ಕಿಮೀ ದೂರ ನಡೆದು ದೆಹಲಿಗೆ ವಾಪಸ್ ಬಂದಿದ್ದಾರೆ ಎಂದು ಹೇಳಲಾಗಿದೆ.
ಸೋನಿಯಾ ಗಾಂಧಿಯವರಿಗೆ ಕೊವಿಡ್ 19 ಸೋಂಕು ಎರಡು ಬಾರಿ ತಗುಲಿತ್ತು. ಆಗಿನಿಂದಲೂ ಅವರಿಗೆ ಅನಾರೋಗ್ಯ ಇನ್ನಿಲ್ಲದಂತೆ ಕಾಡುತ್ತಿದೆ. ಪದೇಪದೇ ಶ್ವಾಸಕೋಶದ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದೇ ವರ್ಷ ಜೂನ್ ತಿಂಗಳಲ್ಲಿ ಅವರ ಮೂಗಿನಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಗಂಗಾರಾಮ್ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅವರಿಗೆ ನಿಯಮಿತವಾಗಿ ವೈದ್ಯಕೀಯ ಪರೀಕ್ಷೆ ನಡೆಯುತ್ತಲೇ ಇರುತ್ತದೆ. ಸೋನಿಯಾ ಗಾಂಧಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ‘ಸೋನಿಯಾ ಗಾಂಧಿ ಶೀಘ್ರವೇ ಗುಣಮುಖರಾಗಲಿ’ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: Karnataka Politics : ಸೋನಿಯಾ ಗಾಂಧಿ ಮುಂದೆ ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ ಆಗಿರುತ್ತಾರೆ: ಶ್ರೀರಾಮುಲು ತಿರುಗೇಟು