ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಇಂದು ಎರಡನೇ ದಿನ. ನಿನ್ನೆ (ಸೆ. 7) ಕನ್ಯಾಕುಮಾರಿಯ ಗಾಂಧಿ ಮಂಟಪದಲ್ಲಿ ರಾಹುಲ್ ಗಾಂಧಿಯವರು ಈ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿದ್ದಾರೆ. ಇಂದು ಬೆಳಗ್ಗೆಯಿಂದ ಪಾದಯಾತ್ರೆ ಪ್ರಾರಂಭವಾಗಿದ್ದು, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪಿ.ಚಿದಂಬರಂ, ಭೂಪೇಶ್ ಬಾಘೇಲ್, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ದಿಗ್ವಿಜಯ ಸಿಂಗ್, ಅಶೋಕ್ ಗೆಹ್ಲೋಟ್, ಯೋಗೇಂದ್ರ ಯಾದವ್ ಮತ್ತು ಇತರರು ಕನ್ಯಾಕುಮಾರಿಯ ಅಗಸ್ತೀಶ್ವರಮ್ನಿಂದ ಕಾಲ್ನಡಿಗೆ ಶುರು ಮಾಡಿದ್ದಾರೆ.
ನಮ್ಮನ್ಯಾರೂ ಟಿವಿಯಲ್ಲಿ ತೋರಿಸುವುದಿಲ್ಲ
ಇಂದು ಬೆಳಗ್ಗೆ ಪಾದಯಾತ್ರೆ ಶುರು ಮಾಡಿದ ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಎಲ್ಲ ಟಿವಿ ಚಾನೆಲ್ಗಳಲ್ಲೂ ಪ್ರತಿದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನೇ ತೋರಿಸುತ್ತಾರೆ. ಆದರೆ ನಮ್ಮನ್ನು ಯಾರೂ ತೋರಿಸುವುದಿಲ್ಲ. ನಮ್ಮ ಕಾರ್ಯಕ್ರಮಗಳನ್ನು ಸರಿಯಾಗಿ ಪ್ರಸಾರ ಮಾಡುವುದಿಲ್ಲ. ಹೀಗಾಗಿ ನಾವು ಈ ಯಾತ್ರೆ ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ. ‘ಭಾರತದ ಆರ್ಥಿಕತೆ ಇವತ್ತು ಹದಗೆಟ್ಟಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಇಡೀ ದೇಶ ವಿನಾಶದತ್ತ ಸಾಗುತ್ತಿದೆ. ಇಲ್ಲಿನ ರೈತರು, ಶ್ರಮಿಕರು, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳನ್ನು ಬಿಜೆಪಿ ಸರ್ಕಾರ ಮೂಲೆಗುಂಪು ಮಾಡುತ್ತಿದೆ’ ಎಂದೂ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜನರ ಸಂಕಷ್ಟ ಅರ್ಥವಾಗುತ್ತಿಲ್ಲ. ಆದರೆ ಇಲ್ಲಿನ ಜನರು ಯಾವುದೇ ಕಷ್ಟಕ್ಕೂ ಹೆದರುವುದಿಲ್ಲ, ಪ್ರತಿಪಕ್ಷಗಳ ಒಬ್ಬೇ ಒಬ್ಬ ನಾಯಕರಿಗೂ ಬಿಜೆಪಿಯ ಭಯವಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ‘ತ್ರಿವರ್ಣ ಧ್ವಜ ಎಂಬುದು ನಮ್ಮ ಏಕತೆ ಮತ್ತು ಆತ್ಮ ಗೌರವದ ಸಂಕೇತ. ಹೀಗಾಗಿ ಅದನ್ನೇ ಕೈಯಲ್ಲಿ ಹಿಡಿದು ಭಾರತ್ ಜೋಡೋ ಯಾತ್ರೆಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಅದೆಷ್ಟೋ ಮೈಲುಗಳಷ್ಟು ದೂರ ನಡೆಯುವುದು ಬಾಕಿ ಇದೆ. ನಾವೆಲ್ಲರೂ ಒಂದಾಗಿ ಭಾರತವನ್ನು ಒಗ್ಗೂಡಿಸೋಣ’ ಎಂದೂ ಹೇಳಿದರು.
ಇದನ್ನೂ ಓದಿ: Bharat Jodo Yatra | ಯಾವೆಲ್ಲ ಪ್ರದೇಶಗಳಲ್ಲಿ ಹಾದು ಹೋಗಲಿದೆ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ?