ನವ ದೆಹಲಿ: ದೇಶದಲ್ಲಿ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು, ಜಿಎಸ್ಟಿ ಹೆಚ್ಚಳ ಸೇರಿ ಇಂಥ ಹತ್ತು-ಹಲವು ವಿಷಯಗಳನ್ನು ವಿರೋಧಿಸಿ ಇಂದು ಕಾಂಗ್ರೆಸ್ ನಾಯಕರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಮುಖ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಪಿ.ಚಿದಂಬರಂ, ಅಶೋಕ್ ಗೆಹ್ಲೋಟ್ ಸೇರಿ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ದೆಹಲಿಯಲ್ಲಿ ಪೊಲೀಸರು ಕಾಂಗ್ರೆಸ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ, ಕಾರ್ಯಕರ್ತರು, ನಾಯಕರು ಮಾತು ಕೇಳಲಿಲ್ಲ. ಪೊಲೀಸ್ ಬಂದೋಬಸ್ತ್ ಮಧ್ಯೆಯೂ ಮೆರವಣಿಗೆ ನಡೆಸುತ್ತಿದ್ದಾರೆ.
ಹಣದುಬ್ಬರ ಕಾಣುತ್ತಿಲ್ಲವೇ?
ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೊಲೀಸರಿಂದ ಬಂಧಿತರಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ನಾಯಕರು, ಕೇಂದ್ರ ಸಚಿವರ ವಿರುದ್ಧ ಕಿಡಿ ಕಾರಿದ್ದಾರೆ. ಬಿಜೆಪಿಯ ಸಚಿವರಿಗೆ ಹಣದುಬ್ಬರ ಕಾಣುತ್ತಿಲ್ಲ. ಪ್ರಧಾನಿ ಮೋದಿಯವರು ಈ ದೇಶದ ಆಸ್ತಿಯನ್ನು ತನ್ನ ಸ್ನೇಹಿತರಿಗೆ ಮಾರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಅರೆಸ್ಟ್
ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಎಐಸಿಸಿ ಪ್ರಧಾನ ಕಚೇರಿ ಎದುರಿನಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಉಗ್ರ ರೂಪದ ಪ್ರತಿಭಟನೆ ನಡೆಸುತ್ತಿದ್ದರು. ಬ್ಯಾರಿಕೇಡ್ಗಳನ್ನು ಹತ್ತಿದ್ದರು. ಇವರನ್ನು ಮಹಿಳಾ ಪೊಲೀಸರು ಎಳೆದುಕೊಂಡು ಹೋಗಿ, ಬಸ್ ಹತ್ತಿಸಿದ್ದಾರೆ.
The party called a nationwide protest today. pic.twitter.com/JTnWrrAT9T
— ANI (@ANI) August 5, 2022
ಬ್ಯಾರಿಕೇಡ್ ಹತ್ತಿದ ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿಯ ಅಕ್ಬರ್ ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ. ಅಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ, ಕಾಂಗ್ರೆಸ್ನ ಹಲವು ಕಾರ್ಯಕರ್ತರೊಂದಿಗೆ ಧರಣಿ ನಡೆಸುತ್ತಿದ್ದಾರೆ. ನಿಯಮ ಉಲ್ಲಂಘಿಸಿದ್ದರಿಂದ ಪ್ರಿಯಾಂಕಾ ಗಾಂಧಿ ಮತ್ತು ಇತರರನ್ನು ಅರೆಸ್ಟ್ ಮಾಡಲು ಪೊಲೀಸರು ಪ್ರಯತ್ನಿಸಿದಾಗ, ಪ್ರಿಯಾಂಕಾ ಗಾಂಧಿ ಕೂಡ ಬ್ಯಾರಿಕೇಡ್ ಹತ್ತಿ ಪ್ರತಿರೋಧಿಸಿದ್ದಾರೆ. ಎರಡು ಲೇಯರ್ಗಳ ಬ್ಯಾರಿಕೇಡ್ ಹಾಕಿದ್ದರೂ, ಅದನ್ನು ತಳ್ಳಿದ್ದಾರೆ.
#watch | Congress leader Priyanka Gandhi Vadra sits on a protest with other leaders and workers of the party outside the AICC HQ pic.twitter.com/ra6LPFhE0H
— ANI (@ANI) August 5, 2022
ತೆಲಂಗಾಣದಲ್ಲಿ ವಿಭಿನ್ನ ಪ್ರತಿಭಟನೆ
ತೆಲಂಗಾಣದಲ್ಲಿ ಕಾಂಗ್ರೆಸ್ ನಾಯಕರು ವಿಭಿನ್ನವಾಗಿ, ತಳ್ಳುವ ಗಾಡಿಯಲ್ಲಿ ತರಕಾರಿಗಳನ್ನು ಇಟ್ಟುಕೊಂಡು, ಗ್ಯಾಸ್ ಸಿಲಿಂಡರ್ಗೆ ಹೂವಿನ ಹಾರ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯನ್ನು ಅವರು ಹೀಗೆ ವಿರೋಧಿಸುತ್ತಿದ್ದಾರೆ.
#watchpic.twitter.com/lQ3r5QAsYI
— ANI_HindiNews (@AHindinews) August 5, 2022
ಮುಂಬೈ, ಬಿಹಾರ, ಜಮ್ಮುವಿನಲ್ಲಿ ಹೋರಾಟ
ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಮಾತ್ರವಲ್ಲದೆ, ಮುಂಬೈ, ಕರ್ನಾಟಕ, ಬಿಹಾರ, ತೆಲಂಗಾಣ, ಜಮ್ಮು-ಕಾಶ್ಮೀರಗಳಲ್ಲೂ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂಬೈನಲ್ಲಿ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಮ್ಮುವಿನಲ್ಲಿ ಕಾಂಗ್ರೆಸ್ಸಿಗರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಹತ್ತಿ, ದಾಂಧಲೆ ಎಬ್ಬಿಸಿದ್ದಾರೆ.