Site icon Vistara News

ಕಪ್ಪುಬಟ್ಟೆ ಧರಿಸಿ ಪ್ರತಿಭಟನೆಗೆ ಇಳಿದ ಕಾಂಗ್ರೆಸ್​; ದೆಹಲಿಯಲ್ಲಿ ಸೆಕ್ಷನ್​ 144 ಜಾರಿ, ರಾಹುಲ್​ ಗಾಂಧಿ ಕಿಡಿ

Congress Protest

ನವ ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿ, ರಾಷ್ಟ್ರಾದ್ಯಂತ ಕಾಂಗ್ರೆಸ್​​ ದೊಡ್ಡ ಮಟ್ಟದ ಪ್ರತಿಭಟನೆ (Congress Nationwide Protests) ಹಮ್ಮಿಕೊಳ್ಳಲು ನಿರ್ಧರಿಸಿತ್ತು. ಬೆಲೆ ಏರಿಕೆ-ಜಿಎಸ್​ಟಿ ಹೆಚ್ಚಳ, ನಿರುದ್ಯೋಗ ಮತ್ತಿತರ ಸಮಸ್ಯೆಗಳನ್ನು ವಿರೋಧಿಸಿ ಸಂಸತ್ತಿನ ಒಳಗೆ ನಿರಂತರವಾಗಿ ಗದ್ದಲ-ಗಲಾಟೆ ಎಬ್ಬಿಸುತ್ತಿರುವ ಕಾಂಗ್ರೆಸ್​ ಇಂದು ರಾಷ್ಟ್ರಪತಿ ಭವನ ಚಲೋ, ಪ್ರಧಾನಿ ನಿವಾಸದತ್ತ ಮೆರವಣಿಗೆಯನ್ನೂ ಹಮ್ಮಿಕೊಳ್ಳಲು ಯೋಜನೆ ರೂಪಿಸಿತ್ತು. ಆದರೆ ದೆಹಲಿ ಪೊಲೀಸರು ಯಾವುದಕ್ಕೂ ಅನುಮತಿ ಕೊಟ್ಟಿಲ್ಲ. ನಗರಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಷ್ಟೇ ಅಲ್ಲ, ಧರಣಿ/ಪ್ರತಿಭಟನೆ ಯಾವುದೇ ನಡೆಸುವುದಿದ್ದರೂ ಜಂತರ್​ ಮಂತರ್​​ನಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದೆಲ್ಲ ಪ್ರಮುಖ ಪ್ರದೇಶದಲ್ಲಿ ಸೆಕ್ಷನ್​ 144 ಜಾರಿ ಮಾಡಲಾಗಿದೆ. ನಗರದಲ್ಲಿ ಭದ್ರತೆ, ಸಂಚಾರ ಸುರಕ್ಷತೆ ಮತ್ತು ಕಾನೂನು-ಸುವ್ಯವಸ್ಥೆ ದೃಷ್ಟಿಯಿಂದ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ನಿರಾಕರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆಗೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ನ್ಯಾಷನಲ್ ಹೆರಾಲ್ಡ್​ ಕೇಸ್​​ನ್ನು ಇ ಡಿ ತನಿಖೆ ನಡೆಸುತ್ತಿರುವುದು ಬಿಜೆಪಿ ಕುತಂತ್ರ. ಆದರೆ ನಾವಿದಕ್ಕೆಲ್ಲ ಹೆದರೋದಿಲ್ಲ. ಬಿಜೆಪಿ ಏನೇ ಮಾಡಿದರೂ ನಮಗೇನೂ ವ್ಯತ್ಯಾಸ ಆಗುವುದಿಲ್ಲ. ನಾನು ನನ್ನ ದೇಶದ ರಕ್ಷಣೆ, ಒಳಿತಿಗಾಗಿ ಕೆಲಸ ಮುಂದುವರಿಸುತ್ತೇನೆ. ನಮ್ಮ ಮೇಲೆ ಒತ್ತಡ ಹಾಕಿದರೆ ನಾವು ಮೌನವಾಗುತ್ತೇವೆ ಎಂದು ಬಿಜೆಪಿಯವರು ಭಾವಿಸಿದ್ದಾರೆ. ಆ ಪಕ್ಷದ ಕುತಂತ್ರಗಳ ವಿರುದ್ಧ ಗಟ್ಟಿಯಾಗಿ ನಿಲ್ಲುತ್ತೇವೆ. ನಾವು ಬೆದರುವುದಿಲ್ಲ’ ಎಂದು ಹೇಳಿದ್ದಾರೆ.

ನಾವು 70 ವರ್ಷಗಳಲ್ಲಿ ಹಂತಹಂತವಾಗಿ ಭಾರತವನ್ನು ಕಟ್ಟಿದ್ದೇವೆ. ಆದರೆ ಬಿಜೆಪಿ ಐದು ವರ್ಷಗಳಲ್ಲಿ ಅದನ್ನು ನಾಶಗೊಳಿಸಿತು. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯಕ್ಕೆ ತುತ್ತಾಗಿದ್ದನ್ನು ನೋಡುತ್ತಿದ್ದೇವೆ. ನಾವೆಲ್ಲ ಸರ್ವಾಧಿಕಾರಿ ಆಡಳಿತದಲ್ಲಿದ್ದೇವೆ. ಜನರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದೇ ಈ ಸರ್ಕಾರದ ಪ್ರಮುಖ ಅಜೆಂಡಾ ಎಂದು ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ. ಹಾಗೇ, ರಾಹುಲ್​ ಗಾಂಧಿ ಮತ್ತೊಮ್ಮೆ ಹಿಟ್ಲರ್​​ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ‘ಹಿಟ್ಲರ್​ ಕೂಡ ಚುನಾವಣೆಗಳನ್ನು ಗೆಲ್ಲುತ್ತಿದ್ದ. ಜರ್ಮನಿಯ ಪ್ರತಿಯೊಂದು ಸಂಸ್ಥೆಗಳ ಮೇಲೆಯೂ ಹಿಡಿತ ಸಾಧಿಸಿದ್ದ’ ಎಂದು ಹೇಳಿದ ರಾಹುಲ್​ ಗಾಂಧಿ, ‘ಇಡೀ ವ್ಯವಸ್ಥೆಯನ್ನು ನನ್ನ ಹಿಡಿತಕ್ಕೆ ಕೊಡಿ. ಚುನಾವಣೆಗಳನ್ನು ಗೆಲ್ಲುವುದು ಹೇಗೆಂದು ನಾನು ತೋರಿಸುತ್ತೇನೆ’ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಸಂಸತ್‌ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿಭಟನೆ; ಉಭಯ ಸದನಗಳ ಕಲಾಪ ಮುಂದೂಡಿಕೆ

Exit mobile version