ನವ ದೆಹಲಿ: ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ರಾಜ್ಘಾಟ್ನಲ್ಲಿ ಇಂದು ಬೆಳಗ್ಗೆ 10ಗಂಟೆಯಿಂದ ಸತ್ಯಾಗ್ರಹ (Congress Satyagraha) ನಡೆಸುತ್ತಿದ್ದು, ಸಂಜೆ 5ಗಂಟೆವರೆಗೆ ಈ ಸತ್ಯಾಗ್ರಹ ಮುಂದುವರಿಯಲಿದೆ. ರಾಜ್ಘಾಟ್ನಲ್ಲಿ ಈಗಾಗಲೇ ಸೆಕ್ಷನ್ 144ಹೇರಲಾಗಿದ್ದು, ಆದರೂ ಕಾಂಗ್ರೆಸ್ ಅಲ್ಲಿ ಸತ್ಯಾಗ್ರಹ ನಡೆಸುತ್ತಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಕಾಂಗ್ರೆಸ್ನ ಹಲವು ಹಿರಿಯ ನಾಯಕರು ಪಾಲ್ಗೊಂಡಿದ್ದಾರೆ.
2019ರ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದರು. ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಇರುತ್ತದೆ ಎಂದು ಹೇಳಿ, ನೀರವ್ ಮೋದಿ, ಲಲಿತ್ ಮೋದಿಯನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆ ಹೇಳಿಕೆಯೇ ರಾಹುಲ್ ಗಾಂಧಿಗೆ ಮುಳುವಾಗಿದೆ. ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಸೂರತ್ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಕೇಸ್ನಲ್ಲಿ ರಾಹುಲ್ ಗಾಂಧಿ ದೋಷಿ ಎಂದು ನ್ಯಾಯಾಲಯ ಮಾ.23ರಂದು ತೀರ್ಪು ನೀಡಿದೆ. ಅದರ ಬೆನ್ನಲ್ಲೇ ಅವರನ್ನು ಲೋಕಸಭೆ ಸದಸ್ಯನ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಇಷ್ಟಾದ ಮೇಲೆ ರಾಹುಲ್ ಗಾಂಧಿಯವರು ಸುದ್ದಿಗೋಷ್ಠಿ ನಡೆಸಿ, ತಾವು ಇಂಥದ್ದಕ್ಕೆಲ್ಲ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಅದಾನಿ ವಿಷಯ ಎತ್ತಿದ್ದಕ್ಕೆ ಹೀಗೆ ಮಾಡಿದ್ದಾರೆ. ನಾನು ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಅದಾನಿ ಷೇರು ಕುಸಿತದ ವಿಷಯದ ಬಗ್ಗೆ ಮಾತಾಡುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ. ಇನ್ನೊಂದೆಡೆ ಬಿಜೆಪಿ, ರಾಹುಲ್ ಗಾಂಧಿಯವರ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿದೆ.
ಇದನ್ನೂ ಓದಿ: Rahul Gandhi: ‘ಅನರ್ಹಗೊಂಡ ಸಂಸದ’ ಎಂದು ಟ್ವಿಟರ್ ಸ್ಟೇಟಸ್ನಲ್ಲಿ ಬರೆದುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಇಂಗ್ಲೆಂಡ್ಗೆ ಭೇಟಿ ಕೊಟ್ಟು ಅಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತಾಡಿದ್ದರು. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದ್ದರು. ದೇಶದ ಆಂತರಿಕ ವಿಚಾರಗಳನ್ನೆಲ್ಲ ಬಾಯಿಗೆ ಬಂದಂತೆ ಮಾತಾಡಿದ್ದರು. ಈ ಬಗ್ಗೆ ಕೂಡ ಬಿಜೆಪಿ ಮತ್ತು ದೇಶದ ಸಾಮಾನ್ಯ ಜನರೂ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲಿಂದ ಬರುತ್ತಿದ್ದಂತೆ ಅವರಿಗೆ ಸವಾಲುಗಳು ಎದುರಾಗುತ್ತಿವೆ. 2019ರ ಮೋದಿ ಹೇಳಿಕೆ ಕೇಸ್ನ ವಿಚಾರಣೆಯನ್ನು ಫೆಬ್ರವರಿಯಲ್ಲಿ ಮುಕ್ತಾಯಗೊಳಿಸಿದ್ದ ಸೂರತ್ ಕೋರ್ಟ್, ಮಾ.23ರಂದು ತೀರ್ಪು ಕಾಯ್ದಿರಿಸಿತ್ತು. ತೀರ್ಪಿನ ದಿನ ರಾಹುಲ್ ಗಾಂಧಿಯವರೇ ಖುದ್ದಾಗಿ ಕೋರ್ಟ್ನಲ್ಲಿ ಹಾಜರಿದ್ದರು. ಅಲ್ಲಿಂದ ಬಂದು ಮಾ.24ರಂದು ಸಂಸತ್ತಿಗೆ ಭೇಟಿ ಕೊಟ್ಟು, ಅಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಸಭೆ ಮಾಡಿದ್ದಷ್ಟೇ. ಕೆಲವೇ ಹೊತ್ತಲ್ಲಿ ಅವರ ಅನರ್ಹತೆ ಆದೇಶ ಲೋಕಸಭೆಯಿಂದ ಹೊರಬಿದ್ದಿದೆ.
ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದ್ದರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಇತರ ಪ್ರಮುಖ ನಾಯಕರಾದ ಕೆ.ಸಿ.ವೇಣುಗೋಪಾಲ್, ಪ್ರಿಯಾಂಕಾ ಗಾಂಧಿ ವಾದ್ರಾ, ಸಿದ್ದರಾಮಯ್ಯ ಸೇರಿ ಅನೇಕರು ತಿರುಗಿಬಿದ್ದಿದ್ದಾರೆ. ಭಾರತ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದಕ್ಕೆ ಇದು ಇನ್ನೊಂದು ಸಾಕ್ಷಿ ಎಂದು ಹೇಳುತ್ತಿದ್ದಾರೆ.