ರಾಯ್ಪುರ: ಕಾಂಗ್ರೆಸ್ ಪಕ್ಷದ 85ನೇ ಸರ್ವಸದಸ್ಯರ ಸಮಾವೇಶ (Congress Plenary Session)ಇಂದಿನಿಂದ ಮೂರು ದಿನಗಳ ಕಾಲ ಛತ್ತೀಸ್ಗಢ್ನ ರಾಯ್ಪುರದಲ್ಲಿ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸಮಾವೇಶಕ್ಕೆ ಚಾಲನೆ ನೀಡಲಿದ್ದು, ಮೊದಲಿಗೆ ಪಕ್ಷದ ಸಂಚಾಲಕ ಸಮಿತಿ ಸಭೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಗೆ ಚುನಾವಣೆ ನಡೆಸುವ ಸಂಬಂಧ ನಿರ್ಣಾಯಕ ನಿರ್ಧಾರ ಹೊರಬೀಳಲಿದೆ.
ಇತ್ತೀಚೆಗಷ್ಟೇ ಭಾರತ್ ಜೋಡೋ ಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕಾಂಗ್ರೆಸ್ ಇದೀಗ ಮೂರು ದಿನಗಳ ಸರ್ವಸದಸ್ಯರ ಸಭೆ ನಡೆಸುತ್ತಿದ್ದು, 2024ರ ಲೋಕಸಭಾ ಚುನಾವಣೆ ಎದುರಿಸಲು ಅಗತ್ಯವಿರುವ ಕಾರ್ಯತಂತ್ರ ರೂಪಿಸುವುದು ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ, ಉಳಿದ ವಿಪಕ್ಷಗಳ ಜತೆ ಮಾತುಕತೆ ನಡೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಈ ಸಭೆಯಲ್ಲಿ ಯೋಜನೆ ರೂಪಿಸಲಿದೆ.
ಇದನ್ನೂ ಓದಿ: ಮೊದಲ ಭಾರತೀಯ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಮರಿ ಮೊಮ್ಮಗ ಕಾಂಗ್ರೆಸ್ಗೆ ರಾಜೀನಾಮೆ
ಇಂದು ಬೆಳಗ್ಗೆ ಕಾಂಗ್ರೆಸ್ ಸಂಚಾಲನಾ ಸಮಿತಿಯ ಸಭೆ ನಡೆಯುವುದರೊಂದಿಗೆ ಸರ್ವಸದಸ್ಯರ ಸಮಾವೇಶ ಪ್ರಾರಂಭಗೊಳ್ಳುವುದು.. ಸಂಜೆ 4ಗಂಟೆಗೆ ನಡೆಯಲಿರುವ ಸಭೆಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣಕ್ಕೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಯುವಕರು, ಉದ್ಯೋಗ ಮತ್ತು ಶಿಕ್ಷಣದ ಬಗ್ಗೆ ಆರು ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಆ ನಿರ್ಣಯಗಳ ಬಗ್ಗೆ ಫೆ25 ಮತ್ತು 26ರಂದು ವ್ಯಾಪಕ ಚರ್ಚೆ ನಡೆಯಲಿದೆ. ಕೊನೇ ದಿನ ಅಂದರೆ ಫೆ.26ರಂದು ಮಧ್ಯಾಹ್ನ 2ಗಂಟೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭಾಷಣ ಮಾಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ.