Site icon Vistara News

Congress President Election | ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಕ್ಟೋಬರ್​ 17ಕ್ಕೆ; ಮತ ಎಣಿಕೆ 19ಕ್ಕೆ

Congress president Post Election to be held on October 17

ನವ ದೆಹಲಿ: ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ (ಎಐಸಿಸಿ) ಅಧ್ಯಕ್ಷನ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 17ಕ್ಕೆ ಚುನಾವಣೆ ನಡೆಯಲಿದ್ದು, ಅದಾಗಿ ಎರಡು ದಿನಗಳ ನಂತರ ಅಂದರೆ ಅಕ್ಟೋಬರ್​ 19ರಂದು ಮತ ಎಣಿಕೆ ನಡೆಯಲಿದೆ. ಈ ಸಂಬಂಧ ಸೆಪ್ಟೆಂಬರ್​ 22ರಂದು ಅಧಿಸೂಚನೆ ಬಿಡುಗಡೆಯಾಗಲಿದ್ದು, ಸೆಪ್ಟೆಂಬರ್​ 24ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಹಾಗೇ, ನಾಮಪತ್ರ ಸಲ್ಲಿಸಲು ಕೊನೇ ದಿನಾಂಕ ಸೆಪ್ಟೆಂಬರ್​ 30.

2019ರಲ್ಲಿ ರಾಹುಲ್​ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತೊರೆದ ಬಳಿಕ ಸೋನಿಯಾ ಗಾಂಧಿಯವರೇ ಹಂಗಾಮಿಯಾಗಿ ಮುಂದುವರಿಯುತ್ತಿದ್ದರು. ಹೊಸ ಅಧ್ಯಕ್ಷರ ನೇಮಕ ಆಗುವವರೆಗೂ ಸೋನಿಯಾ ಗಾಂಧಿ ಆ ಸ್ಥಾನದಲ್ಲಿ ಇರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಮೂರು ವರ್ಷ ಕಳೆದರೂ ಕಾಂಗ್ರೆಸ್ ಚುಕ್ಕಾಣಿ ಇನ್ನೊಬ್ಬರ ಕೈಯಿಗೆ ಹೋಗಿರಲಿಲ್ಲ. ಈ ವರ್ಷ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದ ಮೇಲೆ, ಪಕ್ಷಕ್ಕೆ ಸದೃಢ ನಾಯಕತ್ವ ಬೇಕೆಂಬ ಆಗ್ರಹ ಆಂತರಿಕವಾಗಿಯೇ ಕೇಳಿಬಂದಿತ್ತು. ಕಳೆದ ಒಂದು ವಾರದಲ್ಲಿ ಕಾಂಗ್ರೆಸ್​​ನಲ್ಲಿ ಹಲವು ಸಾಂಸ್ಥಿಕ ಹುದ್ದೆಗಳ ನೇಮಕಾತಿ, ಬದಲಾವಣೆಗಳು ನಡೆದಿವೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ಯಾವಾಗ ಚುನಾವಣೆ ಎಂಬುದು ನಿಗದಿ ಆಗಿರಲಿಲ್ಲ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕ ನಿಗದಿಪಡಿಸಿ, ಅನುಮೋದನೆ ಕೊಡಲೆಂದೇ ಇಂದು (ಆಗಸ್ಟ್​ 28) ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂ ಸಿ) ಸಭೆ ನಡೆದಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಿದೇಶದಲ್ಲಿ ಇರುವುದರಿಂದ, ಈ ಮೀಟಿಂಗ್​ ವರ್ಚ್ಯುವಲ್ ಆಗಿಯೇ ಆಯೋಜನೆಯಾಗಿತ್ತು. ಅಂದಹಾಗೇ, ಚುನಾವಣಾ ದಿನಾಂಕ ನಿಗದಿಯೇನೋ ಆಗಿದೆ. ಒಬ್ಬರಿಗಿಂತ ಹೆಚ್ಚಿನ ಜನ ನಾಮಪತ್ರ ಸಲ್ಲಿಸಿದರೆ ಮಾತ್ರ ಎಲೆಕ್ಷನ್ ನಡೆಯಲಿದ್ದು, ಅದಕ್ಕೂ ಮುನ್ನ ಎಲ್ಲರೂ ಸೇರಿ ಒಬ್ಬರನ್ನೇ ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆಯೂ ಕಾಂಗ್ರೆಸ್​ನಲ್ಲಿದೆ.

ಇದನ್ನೂ ಓದಿ: Rahul Gandhi | ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷ, ಅವರಂಥ ಪ್ರಭಾವಿ ನಾಯಕರು ಯಾರಿದ್ದಾರೆ? ಖರ್ಗೆ ಪ್ರಶ್ನೆ

Exit mobile version