Site icon Vistara News

ಸೋನಿಯಾ ಗಾಂಧಿಗೆ ಕೊರೊನಾ ಸೋಂಕು; ಇ.ಡಿ ವಿಚಾರಣೆಗೆ ಹಾಜರಾಗೋದು ಡೌಟ್‌

Sonia Gandhi

ದೆಹಲಿ: ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಕೊರೊನಾ ಸೋಂಕು (Sonia Gandhi tests Covid positive ತಗುಲಿದ್ದು, ಐಸೋಲೇಟ್‌ ಆಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮಾಹಿತಿ ನೀಡಿದ್ದು, ಸೋನಿಯಾ ಗಾಂಧಿಯವರಿಗೆ ಕೊರೊನಾದ ಸೌಮ್ಯ ಲಕ್ಷಣಗಳಿವೆ. ಜ್ವರವೂ ಸಣ್ಣ ಪ್ರಮಾಣದಲ್ಲಿದೆ. ವೈದ್ಯರು ಪರೀಕ್ಷಿಸಿದ್ದಾರೆ. ಅವರು ಜೂ.8ಕ್ಕೆ ಇ.ಡಿ. ವಿಚಾರಣೆಗೆ ಹಾಜರಾಗುವ ವಿಷಯದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ. ಈ ಬಗ್ಗೆ ಮುಂದೆ ಅಪ್‌ಡೇಟ್‌ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಮಾಲೀಕತ್ವ ಹೊಂದಿರುವ ಯಂಗ್‌ ಇಂಡಿಯಾ ಸಂಸ್ಥೆಯಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಈ ಸಂಸ್ಥೆ ಕಾಂಗ್ರೆಸ್‌ ನೇತೃತ್ವದಲ್ಲಿ ಇದೆ. ಅಕ್ರಮದ ತನಿಖೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ ಎರಡು ದಿನಗಳ ಹಿಂದೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಗೆ ಸಮನ್ಸ್‌ ನೀಡಿದೆ. ಇತ್ತೀಚೆಗೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ್‌ ಖರ್ಗೆಯವರನ್ನೂ ಇ.ಡಿ.ವಿಚಾರಣೆ ಮಾಡಿತ್ತು.

ಜವಾಹರ್‌ಲಾಲ್‌ ನೆಹರೂ ಹುಟ್ಟಿಹಾಕಿದ್ದ ಅಸೋಸಿಯೇಟೆಡ್‌ ಜರ್ನಲ್‌ ಲಿಮಿಟೆಡ್‌ ಪ್ರಕಟಿಸುತ್ತಿದ್ದ ನ್ಯಾಷನ್‌ ಹೆರಾಲ್ಡ್‌ ಪತ್ರಿಕೆಯನ್ನು 2008ರಲ್ಲಿ ಸಾಲದ ಹೊರೆಯಿಂದಾಗಿ ಸ್ಥಗಿತಗೊಳಿಸಲಾಗಿತ್ತು. 2011ರಲ್ಲಿ ರಾಹುಲ್‌ ಗಾಂಧಿ ಯಂಗ್‌ ಇಂಡಿಯಾ ಎಂಬ ಸಂಸ್ಥೆ ಸ್ಥಾಪಿಸಿ, ಇದರಡಿಯಲ್ಲಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಮತ್ತೆ ಪ್ರಾರಂಭವಾಯಿತು. ಆದರೆ ಅಸೋಸಿಯೇಟೆಡ್‌ ಜರ್ನಲ್‌ ಲಿಮಿಟೆಡ್‌ನಿಂದ ಯಂಗ್‌ ಇಂಡಿಯಾ ಸಂಸ್ಥೆಗೆ ನ್ಯಾಷನಲ್‌ ಹೆರಾಲ್ಡ್‌ ಕಾನೂನು ಬದ್ಧವಾಗಿ ವರ್ಗಾವಣೆಯಾಗಿಲ್ಲ. ಹಣಕಾಸು ಅಕ್ರಮ ವರ್ಗಾವಣೆ ನಡೆದಿದೆ ಎಂಬುದು ಆರೋಪ. ಈ ತನಿಖೆಯನ್ನೀಗ ಜಾರಿ ನಿರ್ದೇಶನಾಲಯ ಚುರುಕುಗೊಳಿಸಿದೆ.

ಇದನ್ನೂ ಓದಿ: National Herald case: ಸೋನಿಯಾ, ರಾಹುಲ್‌ಗೆ ಇ.ಡಿ ಸಮನ್ಸ್‌, ಪ್ರತೀಕಾರದ ಕ್ರಮ ಎಂದ ಕಾಂಗ್ರೆಸ್‌

Exit mobile version