ನವ ದೆಹಲಿ: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಇ ಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾಗ ಕಾಂಗ್ರೆಸ್ ನಾಯಕರು-ಕಾರ್ಯಕರ್ತರು ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಿದ್ದರು. ಹಾಗೇ, ಇಂದೂ ಕೂಡ ಕಾಂಗ್ರೆಸ್ಸಿಗರು ದೇಶಾದ್ಯಂತ ಪ್ರತಿಭಟನೆ (Congress Protest ) ನಡೆಸಿದ್ದಾರೆ. ‘ಬೆಲೆ ಏರಿಕೆ, ಜಿಎಸ್ಟಿ ಹೆಚ್ಚಳ, ನಿರುದ್ಯೋಗ, ಅಗ್ನಿಪಥ್’ ಸೇರಿ ವಿವಿಧ ವಿಷಯಗಳನ್ನು ವಿರೋಧಿಸಿ, ಕಪ್ಪು ಬಟ್ಟೆಯನ್ನು ಧರಿಸಿ ಇಂದು ಕಾಂಗ್ರೆಸ್ ಪ್ರಮುಖರು ಪ್ರತಿಭಟಿಸಿದ್ದಾರೆ. ‘ರಾಷ್ಟ್ರಪತಿ ಭವನ ಚಲೋ, ಪ್ರಧಾನಿ ನಿವಾಸಕ್ಕೆ ಘೇರಾವ್ ಹಾಕಲು ಯೋಜನೆ ರೂಪಿಸಿದ್ದರೂ ಕೂಡ ದೆಹಲಿ ಪೊಲೀಸರು ಅದನ್ನು ತಡೆದಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಎಲ್ಲ ಸಂಸದರನ್ನೂ ಪೊಲೀಸರು ವಶಕ್ಕೆ ಪಡೆದು, ಪ್ರತಿಭಟನೆ ಮುಂದುವರಿಸದಂತೆ ಅಡ್ಡಿಯುಂಟುಮಾಡಿದರು. ಸೆಕ್ಷನ್ 144 ಜಾರಿ ಮಾಡಿದ್ದರೂ, ಕಾಂಗ್ರೆಸ್ ನಾಯಕರು ಅದರ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕ್ರಮ ಕೈಗೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.
ಬ್ಯಾರಿಕೇಡ್ ಜಂಪ್ ಮಾಡಿದ ಪ್ರಿಯಾಂಕಾ ಗಾಂಧಿ
ಇಂದು ಇಡೀ ಪ್ರತಿಭಟನೆಯಲ್ಲಿ ಫುಲ್ ಹೈಲೆಟ್ ಆಗಿದ್ದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ. ಪ್ರತಿಭಟನೆ ಪ್ರಾರಂಭದಲ್ಲಿ ಸೋನಿಯಾ ಗಾಂಧಿ ಚಾಲನೆ ಕೊಟ್ಟರು. ಸಂಸತ್ತಿನ ಎದುರು ಕಾಂಗ್ರೆಸ್ ಮಹಿಳಾ ಸಂಸದೆಯರ ಜತೆ ಬ್ಯಾನರ್ ಹಿಡಿದು ನಿಂತ ಅವರು ನಂತರ ಮತ್ತೆಲ್ಲೂ ಕಾಣಿಸಲಿಲ್ಲ. ಬಳಿಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಪತಿ ಭವನ ಚಲೋ ಪ್ರಾರಂಭವಾಯಿತು. ಆದರೆ ಅದನ್ನು ಮುಂದುವರಿಸಲು ಪೊಲೀಸರು ಬಿಡಲಿಲ್ಲ. ವಿಜಯ್ ಚೌಕ್ ಬಳಿ ರಾಹುಲ್ ಗಾಂಧಿ ಸೇರಿ ಸುಮಾರು 65 ಸಂಸದರನ್ನು ವಶಕ್ಕೆ ಪಡೆದರು. ಒಟ್ಟಾರೆ ದೆಹಲಿ ಒಂದರಲ್ಲೇ 300ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತ ಎಐಸಿಸಿ ಪ್ರಧಾನ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿ ಇಂದು ತುಸು ಆಕ್ರಮಣಕಾರಿಯಾಗಿ ವರ್ತಿಸಿದರು. ಕಪ್ಪು ಬಣ್ಣದ ಕುರ್ತಾ-ಪ್ಯಾಂಟ್ ಧರಿಸಿ ಧರಣಿ ಮಾಡುತ್ತಿದ್ದ ಅವರನ್ನು ನಿಯಂತ್ರಿಸಲು ಪೊಲೀಸರು ಪ್ರಯತ್ನಿಸಿದರು. ಕಾರ್ಯಕರ್ತರ ಗುಂಪು ಮೆರವಣಿಗೆ ಹೋಗಲು ಬಿಡಬಾರದು ಎಂದು ಎರಡು ಲೇಯರ್ಗಳ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಆದರೆ ಪ್ರಿಯಾಂಕಾ ಗಾಂಧಿ ಆ ಬ್ಯಾರಿಕೇಡ್ಗಳನ್ನು ಹತ್ತಿ, ಮತ್ತೊಂದು ಬದಿಗೆ ಹಾರಿದ್ದಾರೆ. ಅಷ್ಟಾದ ಮೇಲೆ ನೆಲದ ಮೇಲೆ ಕುಳಿತಿದ್ದಾರೆ. ಪೊಲೀಸರು ಅವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿ, ಸಾಧ್ಯವಾಗದೆ ಎದ್ದಾಗ ಎಳೆದುಕೊಂಡು ಹೋಗಿ ವ್ಯಾನ್ಗೆ ಹತ್ತಿಸಿದ್ದಾರೆ. ಪೊಲೀಸ್ ವಾಹನದ ಮೇಲೆ ಕುಳಿತೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಪೊಲೀಸರಿಂದ ಥಳಿತ !
ಪ್ರತಿಭಟನೆಯ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಪ್ರಜಾಪ್ರಭುತ್ವ ಒಂದು ನೆನಪಾಗುವ ದಿನ ದೂರವಿಲ್ಲ’ ಎಂದಿದ್ದಾರೆ. ಹಾಗೇ, ಇಂದಿನ ಪ್ರತಿಭಟನೆಯ ವೇಳೆ ಪೊಲೀಸರು, ಕಾಂಗ್ರೆಸ್ನ ಹಲವು ಸಂಸದರು, ಕಾರ್ಯಕರ್ತರಿಗೆ ಥಳಿಸಿದ್ದಾರೆ ಎಂದೂ ಆರೋಪಿಸಿದ್ದಾರೆ. ಕೆ.ಸಿ. ವೇಣುಗೋಪಾಲ್, ಅಧೀರ್ ರಂಜನ್ ಚೌಧರಿ ಸೇರಿ ಹಲವು ನಾಯಕರು ನೆಲದ ಮೇಲೆ ಬಿದ್ದಿರುವುದನ್ನು ರಾಹುಲ್ ಗಾಂಧಿ ಶೇರ್ ಮಾಡಿಕೊಂಡ ಫೋಟೋದಲ್ಲಿ ನೋಡಬಹುದು.
ಆರು ತಾಸುಗಳ ಬಳಿಕ ಬಿಡುಗಡೆ
ಬೆಳಗ್ಗೆ ಪ್ರತಿಭಟನೆ ಶುರುವಾದ ಕೆಲವೇ ಹೊತ್ತಲ್ಲಿ ಕಾಂಗ್ರೆಸ್ ಸಂಸದರನ್ನು, ಪ್ರಮುಖ ನಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅವರನ್ನೆಲ್ಲ ನ್ಯೂ ಪೊಲೀಸ್ ಲೈನ್ಸ್ನ ಕಿಂಗ್ಸ್ವಾಮಿ ಕ್ಯಾಂಪ್ನಲ್ಲಿ ಇಡಲಾಗಿತ್ತು. ಆರು ತಾಸುಗಳ ಬಳಿಕ, ಅಂದರೆ ಸಂಜೆ ಹೊತ್ತಿಗೆ ಅವರನ್ನೆಲ್ಲ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಜೈರಾಮ್ ರಮೇಶ್ ಟ್ವೀಟ್ ಮಾಡಿ, ‘ಬೆಲೆ ಏರಿಕೆ ವಿರುದ್ಧ ನಾವೆಲ್ಲ ಪ್ರಜಾಸತ್ತಾತ್ಮಕವಾಗಿ ಮತ್ತು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದರೂ, ಎಲ್ಲರನ್ನೂ ಬಂಧಿಸಿ ಕರೆದುಕೊಂಡು ಹೋಗಲಾಗಿತ್ತು. ಆರು ತಾಸುಗಳ ಬಳಿಕ ಬಿಡುಗಡೆ ಮಾಡಲಾಯಿತು’ ಎಂದು ಹೇಳಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ
ದೆಹಲಿಯಲ್ಲಿ ಮಾತ್ರವಲ್ಲ ಬಿಹಾರ, ಮುಂಬೈ, ಜಮ್ಮು, ತೆಲಂಗಾಣ, ಛತ್ತೀಸ್ಗಢ್, ರಾಜಸ್ಥಾನ ಸೇರಿ ದೇಶದ ಅನೇಕ ಕಡೆಗಳಲ್ಲಿ ಪ್ರತಿಭಟನೆ ನಡೆದಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕರು ಬಸ್ ಟಾಪ್ ಮೇಲೆ ಹತ್ತಿ, ನೆಲದ ಮೇಲೆ ಬಿದ್ದು ಹೊರಳಾಡಿ, ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್ನ ಚಂಡಿಗಢ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ತೆಲಂಗಾಣದಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ಇಟ್ಟು, ಸಿಲಿಂಡರ್ ಗ್ಯಾಸ್ಗಳಿಗೆ ಹೂವಿನ ಹಾರ ಹಾಕುವ ಮೂಲಕ ಬೆಲೆ ಏರಿಕೆಯನ್ನು ವಿರೋಧಿಸಿದ್ದಾರೆ.
ಇದನ್ನೂ ಓದಿ: ಕಪ್ಪು ಕುರ್ತಾ, ಪೇಟಾ ಧರಿಸಿ ಸಿದ್ಧರಾದ ಮಲ್ಲಿಕಾರ್ಜುನ್ ಖರ್ಗೆ; ಬ್ಯಾರಿಕೇಡ್ ಏರುತ್ತಿರುವ ಕಾರ್ಯಕರ್ತರು