ನವ ದೆಹಲಿ: ರಾಹುಲ್ ಗಾಂಧಿ ಅವರು ಇ.ಡಿ ವಿಚಾರಣೆಗೆ ಇಂದು ಬೆಳಗ್ಗೆ 11.45ರ ಹೊತ್ತಿಗೆ ಹಾಜರಾಗಿದ್ದರು. ಕಚೇರಿಯೊಳಗೆ ಮೂರನೇ ದಿನದ ವಿಚಾರಣೆ ನಡೆಯುತ್ತಿದ್ದರೆ, ಹೊರಗಡೆ ಕಾಂಗ್ರೆಸ್ ಪ್ರತಿಭಟನೆ (Congress Protest) ತೀವ್ರ ಸ್ವರೂಪ ಪಡೆದುಕೊಂಡಿದೆ. ಇ.ಡಿ ಕಚೇರಿಯ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಟೈರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಹಾಕಿರುವ ಬ್ಯಾರಿಕೇಡ್‌ಗಳನ್ನು ಮುರಿಯುತ್ತಿದ್ದಾರೆ. ಮಹಿಳಾ ಕಾರ್ಯಕರ್ತರು ಉಗ್ರ ಸ್ವರೂಪದ ಹೋರಾಟ ನಡೆಸುತ್ತಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಮಹಿಳಾ ಕಾರ್ಯಕರ್ತರನ್ನು ಭದ್ರತಾ ಸಿಬ್ಬಂದಿ ಎತ್ತಿ ಕರೆದುಕೊಂಡು ಹೋದ, ಕೈ ಹಿಡಿದು ಎಳೆಯುತ್ತಿರುವ ಫೋಟೋಗಳೆಲ್ಲ ವೈರಲ್ ಆಗುತ್ತಿವೆ.
ಕಾಂಗ್ರೆಸ್ ಪ್ರಧಾನ ಕಚೇರಿಗೆ ಪ್ರವೇಶಿಸುವ ಎಲ್ಲ ಮಾರ್ಗಗಳನ್ನೂ ಪೊಲೀಸರು ಮುಚ್ಚಿದ್ದಾರೆ. ಅಲ್ಲಿ ಯಾರನ್ನೂ ಬಿಡುತ್ತಿಲ್ಲ. ಹೀಗಾಗಿ ಇಂದು ಬೆಳಗ್ಗೆ ಹಿರಿಯ ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ, ಕೆ.ಸಿ.ವೇಣುಗೋಪಾಲ್, ಭೂಪೇಶ್ ಬಾಘೆಲ್, ಅಜಯ್ ಮಾಕೆನ್, ಗೌರವ್ ಗೊಗೊಯಿ ಮತ್ತಿತರರು ಎಐಸಿಸಿ ಪ್ರಧಾನ ಕಚೇರಿಯ ಗೇಟ್ ಹೊರಭಾಗದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದರು. ಹಾಗೇ, ಕಾಂಗ್ರೆಸ್ ಸಂಸದರೆಲ್ಲ ಸಂಸತ್ತಿನ ಗಾಂಧಿ ಪ್ರತಿಮೆಯ ಬಳಿ ಕುಳಿತು ರಾಹುಲ್ ಗಾಂಧಿ ಇ.ಡಿ ವಿಚಾರಣೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರೆಲ್ಲ ಬಿಜೆಪಿ ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ದೀಪೇಂದರ್ ಹೂಡಾ ಮನೆಗೆ ನಿರ್ಬಂಧ
ಪ್ರತಿಭಟನೆಯನ್ನು ನಿಯಂತ್ರಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವ ಪೊಲೀಸರು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಮನೆಯ ಸುತ್ತ ಬ್ಯಾರಿಕೇಡ್ ಹಾಕಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹೂಡಾ, ʼನನ್ನದೇ ಪಕ್ಷದ ಪ್ರಧಾನ ಕಚೇರಿಗೆ ಹೋಗಲು ಪೊಲೀಸರು ಬಿಡುತ್ತಿಲ್ಲ. ನನ್ನ ಅಧಿಕೃತ ನಿವಾಸದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿ ನಿರ್ಬಂಧಿಸಲಾಗಿದೆ. ಇವೆಲ್ಲವೂ ರಾಜಕೀಯ ಸೇಡಿನ ಒಂದು ಭಾಗʼ ಎಂದು ಆಪಾದಿಸಿದ್ದಾರೆ.
ಪೊಲೀಸರು ಒದ್ದರು!
ನನ್ನ ಬೆನ್ನಿಗೆ ಪೊಲೀಸರು ಒದ್ದರು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ. ವಿ. ಆರೋಪಿಸಿದ್ದಾರೆ. ʼನಾವೆಲ್ಲ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯ ಸಮೀಪ ಪ್ರತಿಭಟನೆ ನಡೆಸುತ್ತಿದ್ದೆವು. ಈ ವೇಳೆ ನನಗೆ ಪೊಲೀಸರು ಹಿಂದಿನಿಂದ ಒದ್ದಿದ್ದಾರೆ. ನಾನು ನೆಲದ ಮೇಲೆ ಬಿದ್ದೆ. ಆಗ ಎಲ್ಲ ಪೊಲೀಸರೂ ನನ್ನನ್ನು ಸುತ್ತುವರಿದರು. ಧೈರ್ಯವಿದ್ದರೆ ನನ್ನನ್ನು ಕರೆದುಕೊಂಡು ಹೋಗಿ ಎಂದು ಅವರಿಗೆ ಸವಾಲು ಹಾಕಿದೆʼ ಎಂದು ಹೇಳಿದ್ದಾರೆ.
ಮೂರು ದಿನಗಳಲ್ಲಿ 800 ಜನರನ್ನು ವಶಕ್ಕೆ ಪಡೆದ ಪೊಲೀಸ್
ಕಳೆದ ಮೂರು ದಿನಗಳಲ್ಲಿ ದೆಹಲಿಯಲ್ಲಿ ಕಾಂಗ್ರೆಸಿಗರ ಪ್ರತಿಭಟನೆ ನಡೆಯುತ್ತಿದೆ. ದಿನದಿನವೂ ಪ್ರತಿಭಟನೆ ತೀವ್ರತೆ ಹೆಚ್ಚುತ್ತಿದ್ದು, ತೆಗೆದುಕೊಳ್ಳಲಾದ ಭದ್ರತಾ ಕ್ರಮಗಳ ಬಗ್ಗೆ ಇಂದು ದೆಹಲಿ ಪೊಲೀಸ್ ಅಧಿಕಾರಿ ಸಾಗರ್ ಹೂಡಾ ಮಾಹಿತಿ ನೀಡಿದ್ದಾರೆ. ʼಸೋಮವಾರದಿಂದ ರಾಹುಲ್ ಗಾಂಧಿ ಇ.ಡಿ. ವಿಚಾರಣೆ ನಡೆಯುತ್ತಿದ್ದು, ಅಂದಿನಿಂದ ಇಲ್ಲಿಯವರೆಗೆ 800 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿಭಟನೆ ನಡೆಸಲು ಪಕ್ಷಕ್ಕೆ ಅನುಮತಿ ನೀಡಿರಲಿಲ್ಲ. ಇ.ಡಿ. ಕಚೇರಿ ಸುತ್ತಲೂ ಸೆಕ್ಷನ್ 144 ಹೇರಲಾಗಿತ್ತು. ಹಾಗಿದ್ದಾಗ್ಯೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವರು ನಿಯಮ ಉಲ್ಲಂಘನೆ ಮಾಡಿದ್ದರಿಂದ ವಶಕ್ಕೆ ಪಡೆಯಬೇಕಾಯಿತುʼ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಇಂದು ಮುಂದುವರಿಯಲಿರುವ ಇ.ಡಿ ವಿಚಾರಣೆ, ಕಾಂಗ್ರೆಸ್ ಗದ್ದಲ