ನವ ದೆಹಲಿ: ಇಂದು ನಡೆಯುತ್ತಿರುವ ರಾಷ್ಟ್ರಪತಿ ಚುನಾವಣೆ (Presidential Election 2022)ಯಲ್ಲಿ ಬಿಜೆಪಿಯ ಏಳು ಶಾಸಕರು ಮತ್ತು ಎರಡು ಸಂಸದರು ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾದ ಬೆನ್ನಲ್ಲೇ, ಇತ್ತ ಕಾಂಗ್ರೆಸ್, ಎನ್‌ಸಿಪಿ ಮತ್ತು ಸಮಾಜವಾದಿ ಪಕ್ಷದ ಶಾಸಕ/ಸಂಸದರೂ ಕೂಡ ಅಡ್ಡ ಮತದಾನ ಮಾಡಿರುವ ಮಾತು ಕೇಳಿಬರುತ್ತಿದೆ. ಗುಜರಾತ್, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ಕಾಂಗ್ರೆಸ್ ಶಾಸಕರು ಅಡ್ಡಮತದಾನ ಮಾಡಿದ್ದು ನೂರಕ್ಕೆ ನೂರರಷ್ಟು ಸ್ಪಷ್ಟ. ಅವರೆಲ್ಲರೂ ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮುರಿಗೆ ಮತ ಹಾಕಿದ್ದು ಸತ್ಯ. ಫಲಿತಾಂಶ ಬಂದ ಮೇಲೆ ಇದು ಗೊತ್ತಾಗುತ್ತದೆ ಎಂದು ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಶಾಸಕ ಕರಿಮುದ್ದೀನ್ ಬರ್ಭುಯ ತಿಳಿಸಿದ್ದಾರೆ. ಎಲ್ಲ ಸೇರಿ ಕಾಂಗ್ರಸ್‌ನ ಒಟ್ಟು 20 ಶಾಸಕರ ಮತ ದ್ರೌಪದಿ ಮುರ್ಮು ಪಾಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಒಪ್ಪಿಕೊಂಡ ಕಾಂಗ್ರೆಸ್ ಶಾಸಕ
ಈ ಮಧ್ಯೆ ಹರ್ಯಾಣ ಕಾಂಗ್ರೆಸ್ ಶಾಸಕ ಕುಲದೀಪ್ ಬಿಷ್ಣೋಯಿ ಅವರು ತಾವು ಯಶವಂತ್ ಸಿನ್ಹಾರಿಗೆ ಮತ ಹಾಕಲಿಲ್ಲ. ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೇ ನನ್ನ ವೋಟ್ ಹಾಕಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ನಾನು ನನ್ನ ಆತ್ಮಸಾಕ್ಷಿಯ ಮಾತು ಕೇಳಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.
ಕುಲದೀಪ್ ಬಿಷ್ಣೋಯಿ ಈಗಾಗಲೇ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕಳೆದ ರಾಜ್ಯ ಸಭೆ ಚುನಾವಣೆಯಲ್ಲೂ ಇವರು ಅಜಯ್ ಮಾಕೆನ್‌ಗೆ ಮತ ಚಲಾಯಿಸಲಿಲ್ಲ. ರಾಜ್ಯಸಭೆ ಎಲೆಕ್ಷನ್‌ನಲ್ಲಿ ಅಡ್ಡಮತದಾನ ಮಾಡಿದ್ದ ಇವರನ್ನು ಕಾಂಗ್ರೆಸ್ ಎಲ್ಲ ಸಾಂಸ್ಥಿಕ ಹುದ್ದೆಗಳಿಂದ ತೆಗೆದುಹಾಕಿದೆ. ಈಗ ರಾಷ್ಟ್ರಪತಿ ಚುನಾವಣೆಯಲ್ಲೂ ಅವರು ಅಡ್ಡಮತದಾನವನ್ನೇ ಮಾಡಿದ್ದಾರೆ.
ಇದನ್ನೂ ಓದಿ: President Election: ದ್ರೌಪದಿ ಮುರ್ಮು ಬೆಂಬಲಿಸಲು ಶಿವಸೇನೆ ನಿರ್ಧಾರ, ಶಿಂಧೆ ಬಣದ ಜತೆಗೂ ಹೊಂದಾಣಿಕೆ?
ಹಾಗೇ, ಒಡಿಶಾದ ಶಾಸಕ ಮೊಹಮ್ಮದ್ ಮೊಕ್ವಿಮ್ ಕೂಡ ತಾವು ದ್ರೌಪದಿ ಮುರ್ಮುರನ್ನೇ ಬೆಂಬಲಿಸಿದ್ದಾಗಿ ತಿಳಿಸಿದ್ದಾರೆ. ನಾನು ಯಾರನ್ನು ಬೆಂಬಲಿಸಬೇಕು ಎಂಬುದು ನನ್ನ ವೈಯಕ್ತಿಕ ಆಯ್ಕೆ. ನಾನು ನನ್ನ ಹೃದಯ ಏನು ಹೇಳಿದೆಯೋ ಅದನ್ನೇ ಕೇಳಿದೆ ಎಂದಿದ್ದಾರೆ. ಹಾಗೇ, ಎನ್‌ಸಿಪಿ (ಶರದ್ ಪವಾರ್ ಪಕ್ಷ)ಯ ಶಾಸಕ ಕಂಧಲ್ ಎಸ್ ಜಡೇಜಾ ಅವರೂ ಎನ್‌ಡಿಎ ಅಭ್ಯರ್ಥಿಗೇ ಮತ ಹಾಕಿದ್ದಾರೆ. ಇಡೀ ಪಕ್ಷ ಯಶವಂತ್ ಸಿನ್ಹಾರನ್ನು ಬೆಂಬಲಿಸಿದ್ದರೆ, ಇವರೊಬ್ಬರು ಮಾತ್ರ ಅಡ್ಡಮತದಾನ ಮಾಡಿದ್ದಾರೆ. ಮತ್ತು ತಾನು ಮುರ್ಮುರಿಗೇ ಮತ ಹಾಕಿದ್ದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಹಾಗೇ, ಉತ್ತರ ಪ್ರದೇಶದ ಪ್ರಗತಿಶೀಲ ಸಮಾಜವಾದಿ ಪಾರ್ಟಿ (ಸಮಾಜವಾದಿ ಪಕ್ಷದ ಮೈತ್ರಿ ಪಕ್ಷ)ಯ ಹಿರಿಯ ನಾಯಕ ಶಿವಪಾಲ್ ಯಾದವ್ ಎನ್‌ಡಿಎ ಒಕ್ಕೂಟದ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾರೆ. ಹಿಂದೊಮ್ಮೆ ಯಶವಂತ್ ಸಿನ್ಹಾ ಅವರು ಮುಲಾಯಂ ಸಿಂಗ್ ಯಾದವ್‌ರನ್ನು ಐಎಸ್‌ಐ ಏಜೆಂಟ್ ಎಂದು ಹೇಳಿದ್ದರು. ಅಂಥ ಆರೋಪ ಮಾಡಿದ ಅವರನ್ನು ನಾನಂತೂ ಖಂಡಿತವಾಗಿ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ ಭೋಜಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಹಜೀಲ್ ಇಸ್ಲಾಂ ಕೂಡ ದ್ರೌಪದಿ ಮುರ್ಮುಗೇ ವೋಟ್ ಮಾಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗರ ಅಡ್ಡ ಮತದಾನ; 7 ಶಾಸಕರು, ಇಬ್ಬರು ಸಂಸದರ ಮೇಲೆ ಅನುಮಾನ