ಭಾರತದಲ್ಲಿ ಚೀತಾ ಸಂತತಿ ಪುನರುಜ್ಜೀವನಗೊಳಿಸುವ ಸಲುವಾಗಿ ನಮೀಬಿಯಾದಿಂದ ಎಂಟು ಚಿರತೆಗಳನ್ನು ಮಧ್ಯಪ್ರದೇಶದ ಕುನೋ ಪಾಲ್ಪುರ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹುಟ್ಟಿದ ದಿನವಾದ ಸೆಪ್ಟೆಂಬರ್ 17ರಂದೇ ಈ ಚೀತಾಗಳು ಭಾರತಕ್ಕೆ ಬರುತ್ತಿರುವುದು ವಿಶೇಷ. ಅಷ್ಟೇ ಅಲ್ಲ, ಚೀತಾಗಳನ್ನು ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಪಾಲ್ಗೊಳ್ಳಲಿದ್ದಾರೆ.
ಇಷ್ಟೆಲ್ಲದರ ಮಧ್ಯೆ ಕಾಂಗ್ರೆಸ್ ಒಂದು ಕ್ಯಾತೆ ತೆಗೆದಿದೆ. ‘ಇದೀಗ ಚೀತಾವನ್ನು ಭಾರತಕ್ಕೆ ಕರೆತರುತ್ತಿರುವುದು ನಾನೇ ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಆದರೆ ವಾಸ್ತವದಲ್ಲಿ ಈ ಪ್ರೊಜೆಕ್ಟ್ ಚೀತಾ (Project Cheetah) ಎಂಬುದು ಕಾಂಗ್ರೆಸ್ಗೆ ಸೇರಬೇಕಾದ ಕ್ರೆಡಿಟ್ ಆಗಿದೆ. ಪ್ರೊಜೆಕ್ಟ್ ಚೀತಾದ ಪ್ರಸ್ತಾವನೆಯನ್ನು ಸಿದ್ಧ ಮಾಡಿ, ಅದಕ್ಕೆ ಅನುಮೋದನೆ ನೀಡಿದ್ದು 2008-09ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಟ್ವೀಟ್ ಮಾಡಿರುವ ಕಾಂಗ್ರೆಸ್ ‘2008-09ರಲ್ಲಿ ಪ್ರಾಜೆಕ್ಟ್ ಚೀತಾ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಯಿತು. ಬಳಿಕ ಅದಕ್ಕೆ ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿತು. ಅದರ ಮುಂದುವರಿದ ಭಾಗವಾಗಿ ಅಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರಾದ ಜೈರಾಮ್ ರಮೇಶ್ ಅವರು ಆಫ್ರಿಕಾದ ಚೀತಾ ಔಟ್ರೀಚ್ ಸೆಂಟರ್ಗೆ ಹೋಗಿ ಮಾತುಕತೆಯನ್ನೂ ನಡೆಸಿದ್ದರು. ಆದರೆ 2013ರಲ್ಲಿ ಈ ಯೋಜನೆಗೆ ಸುಪ್ರೀಂಕೋರ್ಟ್ ನಿಷೇಧ ವಿಧಿಸಿತು. ಏಳುವರ್ಷ ವಿಚಾರಣೆ ನಡೆದ ಬಳಿಕ 2020ರಲ್ಲಿ ಸುಪ್ರೀಂಕೋರ್ಟ್ ನಿಷೇಧವನ್ನು ತೆಗೆದು ಹಾಕಿತು. ಇಷ್ಟೆಲ್ಲ ಆದ ಮೇಲೆ ಈಗ ಚಿರತೆಗಳು ಬರುತ್ತಿವೆ’ ಎಂದು ಹೇಳಿದೆ. ಹಾಗೇ, ಜೈರಾಮ್ ರಮೇಶ್ ಅವರು ಚಿರತೆಯೊಂದರ ಮೈನೇವರಿಸುತ್ತಿರುವ ಫೋಟೋವನ್ನೂ ಹಂಚಿಕೊಂಡಿದೆ.
ಚೀತಾಗಳನ್ನು ಭಾರತಕ್ಕೆ ತಂದು, ಅವುಗಳ ಸಂತತಿ ಹೆಚ್ಚಿಸಬೇಕು ಎಂಬ ಯೋಜನೆಯನ್ನು ಕಾಂಗ್ರೆಸ್ 14 ವರ್ಷಗಳ ಹಿಂದೆಯೇ ಜಾರಿಗೆ ತಂದಿತ್ತು. ಅದರ ಫಲವಾಗಿಯೇ ಇಂದು ಚೀತಾಗಳು ಭಾರತಕ್ಕೆ ಬರುತ್ತಿವೆ ಹೊರತು ಬಿಜೆಪಿಯಿಂದ ಅಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಇನ್ನು ಎಂಟು ಚೀತಾಗಳು ನಮೀಬಿಯಾದಿಂದ B747 ಜಂಬೋ ಜೆಟ್ ಮೂಲಕ ಮಧ್ಯಪ್ರದೇಶದ ಗ್ವಾಲಿಯರ್ ತಲುಪಲಿದ್ದು, ಅಲ್ಲಿಂದ ಶಿಯೋಪುರ್ನಲ್ಲಿರುವ ಕುನೋ ನ್ಯಾಷನಲ್ ಪಾರ್ಕ್ಗೆ ಏರ್ಪೋರ್ಸ್ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗುವುದು.
ಇದನ್ನೂ ಓದಿ: Viral Video | ನಾಳೆ ನಮೀಬಿಯಾದಿಂದ ಭಾರತಕ್ಕೆ ಬರಲಿರುವ ಚೀತಾಗಳ ಫಸ್ಟ್ಲುಕ್ ಇಲ್ಲಿದೆ