Site icon Vistara News

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ; ಟಾಸ್ಕ್‌ಫೋರ್ಸ್‌ ರಚಿಸಿದ ಸೋನಿಯಾ ಗಾಂಧಿ

Congress Taskforce 2024

ನವದೆಹಲಿ: 2024ರ ಲೋಕಸಭೆ ಚುನಾವಣೆ ಮತ್ತು ಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ ನಾಯಕರು ಪಕ್ಷವನ್ನು ಬಲಪಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. 2014ರ ಲೋಕಸಭಾ ಚುನಾವಣೆಯಿಂದ ಕಾಂಗ್ರೆಸ್‌ ಸೋಲಿನ ಪರ್ವ ಶುರುವಾಗಿದೆ. ಕಳೆದ ಮಾರ್ಚ್‌ನಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ತುಂಬ ಹೀನಾಯವಾಗಿ ಸೋತ ನಂತರವಂತೂ ಕಾಂಗ್ರೆಸ್‌ಗೆ ಒತ್ತಡ ಜಾಸ್ತಿಯಾಗಿದೆ. ಪಕ್ಷದೊಳಗಿನ ಹಿರಿ-ಕಿರಿಯ ನಾಯಕರ ನಡುವೆಯೇ ಭಿನ್ನಾಭಿಪ್ರಾಯ ಉಂಟಾಗಿದೆ. ಈ ಮಧ್ಯೆ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ರನ್ನು ಪಕ್ಷಕ್ಕೆ ಸೇರಿಸಿಕೊಂಡು, ಮುಂದಿನ ಚುನಾವಣೆಗಳ ತಂತ್ರ ರೂಪಿಸುವ ಕಾಂಗ್ರೆಸ್‌ ಪ್ರಯತ್ನವೂ ಫಲಪ್ರದವಾಗಲಿಲ್ಲ. ಐದಾರು ಸುತ್ತಿನ ಮಾತುಕತೆಯ ಬಳಿಕವೂ ಪ್ರಶಾಂತ್‌ ಕಿಶೋರ್‌ ʼಕೈʼ ಹಿಡಿಯಲೇ ಇಲ್ಲ. ಇಷ್ಟೆಲ್ಲ ಅಡೆತಡೆಗಳ ಮಧ್ಯೆಯೂ ಪಕ್ಷ ಬಲವರ್ಧನೆಗೆ ಮುಂದಾಗಿರುವ ಕಾಂಗ್ರೆಸ್‌ ವರಿಷ್ಠರು, ಪಕ್ಷದೊಳಗಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಜತೆ, ಜನರನ್ನು ತಲುಪುವ ಪ್ರಯತ್ನದ ಭಾಗವಾಗಿ ಎರಡು ಗುಂಪನ್ನು ರಚಿಸಿದ್ದಾರೆ. ಅದರಲ್ಲಿ ಒಂದು ರಾಜಕೀಯ ವ್ಯವಹಾರಗಳ ಗುಂಪಾಗಿದ್ದರೆ, ಇನ್ನೊಂದು ಟಾಸ್ಕ್‌ಫೋರ್ಸ್‌ 2024 (Congress Taskforce 2024).

ಕಾಂಗ್ರೆಸ್‌ ಇತ್ತೀಚೆಗಷ್ಟೇ ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ನವಸಂಕಲ್ಪ ಶಿಬಿರವನ್ನು ನಡೆಸಿದೆ. ಅದರಲ್ಲಿ, ಒಬ್ಬ ವ್ಯಕ್ತಿ, ಒಂದು ಪೋಸ್ಟ್‌, ಒಂದು ಕುಟುಂಬ, ಒಂದು ಟಿಕೆಟ್‌ನಂತಹ ಮಹತ್ವದ ಘೋಷಣೆಗಳನ್ನು ಮಾಡಿತ್ತು. ಅದಾಗಿ ಒಂದೇ ವಾರದಲ್ಲಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ರಾಹುಲ್‌ ಗಾಂಧಿ, ಗುಲಾಂ ನಬಿ ಆಜಾದ್‌ ಮತ್ತು ಆನಂದ್‌ ಶರ್ಮಾ, ಮಲ್ಲಿಕಾರ್ಜುನ್‌ ಖರ್ಗೆ, ಅಂಬಿಕಾ ಸೋನಿ, ದಿಗ್ವಿಜಯ ಸಿಂಗ್‌, ಕೆ.ಸಿ.ವೇಣುಗೋಪಾಲ್‌, ಜಿತೇಂದ್ರ ಸಿಂಗ್‌ ಅವರನ್ನೊಳಗೊಂಡ ರಾಜಕೀಯ ವ್ಯವಹಾರಗಳ ಗುಂಪನ್ನು ರಚಿಸುವ ಜತೆ, ಪಿ.ಚಿದಂಬರಂ, ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸುರ್ಜೇವಾಲಾ, ಮುಕುಲ್‌ ವಾಸ್ನಿಕ್‌, ಜೈರಾಮ್‌ ರಮೇಶ್‌, ಅಜಯ್‌ ಮೇಕನ್‌ ಮತ್ತು ಸುನಿಲ್‌ ಕಾನುಗೋಲು ಅವರನ್ನೊಳಗೊಂಡ ಟಾಸ್ಕ್‌ಫೋರ್ಸ್‌ 2024ನ್ನೂ ರಚನೆ ಮಾಡಿದ್ದಾರೆ. ಇದರಲ್ಲಿ ರಾಜಕೀಯ ವ್ಯವಹಾರಗಳ ಗುಂಪಿಗೆ ಸೋನಿಯಾ ಗಾಂಧಿಯೇ ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟ ಒಂದೇ ವಾರದಲ್ಲಿ ಕಮಲ ಹಿಡಿದ ಸುನಿಲ್‌ ಜಾಖರ್‌

ಕಾಂಗ್ರೆಸ್‌ನಲ್ಲಿ ಜಿ 23 ನಾಯಕರು ಭಿನ್ನಮತೀಯರು ಎಂದು ಗುರುತಿಸಿಕೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತ ಬೆನ್ನಲ್ಲೇ, ಇವರೆಲ್ಲ ಸೇರಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಪಕ್ಷದ ನಾಯಕತ್ವ ಬದಲಾವಣೆಯಾಗಬೇಕು ಮತ್ತು ತಳಮಟ್ಟದಿಂದ ಪಕ್ಷ ಬಲಪಡಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದ್ದರು. ಅದಕ್ಕೆ ಸೋನಿಯಾ ಗಾಂಧಿ ಕೂಡ ಖಡಕ್‌ ಆಗಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ಗೆ ನಾನೇ ಅಧ್ಯಕ್ಷೆಯಾಗಿರುತ್ತೇನೆ ಎಂದು ಹೇಳಿದ್ದರು. ಇದೀಗ ರಚಿಸಲಾಗಿರುವ ಪೊಲಿಟಿಕಲ್‌ ಅಫೇರ್‌ ಗ್ರೂಪ್‌ನಲ್ಲಿ ಜಿ23 ನಾಯಕರಾದ ಗುಲಾಂ ನಬಿ ಆಜಾದ್‌ ಮತ್ತು ಆನಂದ್‌ ಶರ್ಮಾ ಇದ್ದಾರೆ. ಆದರೆ ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ರಚಿತಗೊಂಡಿರುವ ಟಾಸ್ಕ್‌ಫೋರ್ಸ್‌ 2024ರಲ್ಲಿ ಜಿ23 ಗ್ರೂಫ್‌ನ ಯಾರೂ ಇಲ್ಲ.

ಟಾಸ್ಕ್‌ಫೋರ್ಸ್‌ನಲ್ಲಿರುವ ಪ್ರತಿ ಸದಸ್ಯನಿಗೂ ಪಕ್ಷ ಸಂಘಟನೆ, ಸಂಪರ್ಕ, ಮಾಧ್ಯಮ, ಹಣಕಾಸು, ಚುನಾವಣಾ ನಿರ್ವಹಣೆಗೆ ಸಂಬಂಧಪಟ್ಟ ಒಂದಲ್ಲ ಒಂದು ಜವಾಬ್ದಾರಿಯನ್ನು ನೀಡಲಾಗುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ. ಅಷ್ಟೇ ಅಲ್ಲ, ಸಂಸದೀಯ ಮಂಡಳಿ ಹೊರತಾಗಿ ಪ್ರತಿ ರಾಜ್ಯದಲ್ಲೂ ರಾಜಕೀಯ ವ್ಯವಹಾರಗಳ ಸಮಿತಿಯನ್ನು ರಚಿಸಲು ಕಾಂಗ್ರೆಸ್‌ ನಿರ್ಧಾರ ಮಾಡಿದೆ. ಹೀಗೊಂದು ಸಮಿತಿ ಮಾಡಬೇಕು ಎಂಬುದು ಕಾಂಗ್ರೆಸ್‌ ಭಿನ್ನಮತೀಯರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಇದೆಲ್ಲದರ ಮಧ್ಯೆ ಅಕ್ಟೋಬರ್‌ 2ರಿಂದ ಕಾಂಗ್ರೆಸ್‌ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆ ನಡೆಸಲಿದೆ. ಇದನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಸೆಂಟ್ರಲ್‌ ಪ್ಲ್ಯಾನಿಂಗ್‌ ಗ್ರೂಪ್‌ವೊಂದನ್ನೂ ರಚಿಸಿದೆ.

ಇದನ್ನೂ ಓದಿ: ಕಾಂಗ್ರೆಸ್‌ನವರಿಗೆ ಭಗತ್ ಸಿಂಗ್ ಬಗ್ಗೆ ಲವ್ ಹೇಗೆ ಶುರುವಾಯಿತೋ ಗೊತ್ತಿಲ್ಲ: ಪ್ರತಾಪ್ ಸಿಂಹ ಲೇವಡಿ

Exit mobile version