Site icon Vistara News

ಹಿಮಂತ್​​ ಬಿಸ್ವಾ ಶರ್ಮಾ ವಂಚಿಸುತ್ತಿದ್ದಾರೆ, ಎಚ್ಚರವಿರಲಿ; ಪ್ರಧಾನಿ ಮೋದಿಗೆ ಸಲಹೆ ನೀಡಿದ ಕಾಂಗ್ರೆಸ್​​

Himant Biswa Sharma On Motherhood

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತೀವ್ರವಾಗಿ ಟೀಕಿಸುತ್ತಿದ್ದಾರೆ. ಇದು ಗಾಂಧಿ ಪರಿವಾರವನ್ನು ಸಶಕ್ತಗೊಳಿಸಿಕೊಳ್ಳಲು ಮಾಡುತ್ತಿರುವ ಯಾತ್ರೆ ಎಂದೂ ವ್ಯಂಗ್ಯವಾಡಿದ್ದಾರೆ. ಹೀಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ನಿರಂತರವಾಗಿ ಟೀಕೆ ಮಾಡುತ್ತಿರುವ ಹಿಮಂತ್ ಬಿಸ್ವಾ ಶರ್ಮಾರಿಗೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ. ಅವರು 2010ರಲ್ಲಿ ಅಂದರೆ ಸುಮಾರು 12 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ವೊಂದನ್ನು ಈಗ ಮತ್ತೆ ವೈರಲ್ ಮಾಡಿದೆ.

ಹಿಮಂತ್​ ಬಿಸ್ವಾ ಶರ್ಮಾ ಈ ಮೊದಲು ಕಾಂಗ್ರೆಸ್​ನಲ್ಲಿಯೇ ಇದ್ದವರು. 2015ರಲ್ಲಿ ರಾಹುಲ್ ಗಾಂಧಿಯ ಮೇಲೆ ಮುನಿಸಿಕೊಂಡೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೀಗೆ ಕಾಂಗ್ರೆಸ್​​ನಲ್ಲಿದ್ದಾಗ 2010ರಲ್ಲಿ ಅವರು ಒಂದು ಟ್ವೀಟ್ ಮಾಡಿದ್ದರು. ‘ರಾಹುಲ್​ ಗಾಂಧಿಯವರು ಒಂದು ಸೂಕ್ತ ಸಮಯದಲ್ಲಿ ಭಾರತದ ಪ್ರಧಾನಮಂತ್ರಿಯಾಗುತ್ತಾರೆ. ಆಗ ನಮ್ಮ ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ ದೆಹಲಿಗೆ ಹೋಗಿ ಅವರನ್ನು ಭೇಟಿಯಾಗಲಿದೆ’ ಎಂಬುದು ಅಂದು ಅವರು ಮಾಡಿದ್ದ ಟ್ವೀಟ್​​ನ ಒಕ್ಕಣೆ.

ಹಿಮಂತ ಬಿಸ್ವಾ ಶರ್ಮಾ ಯಾವ ಸಂದರ್ಭದಲ್ಲಿ ಹೀಗೆ ಟ್ವೀಟ್ ಮಾಡಿದ್ದರು ಗೊತ್ತಿಲ್ಲ, ಅದರಲ್ಲಿ ರಾಹುಲ್​ ಗಾಂಧಿ ಮುಂದೆ ಭಾರತದ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದನ್ನೇ ಈಗ ಕಾಂಗ್ರೆಸ್​ ಎತ್ತಾಡುತ್ತಿದೆ. ಅದೇ ಟ್ವೀಟ್​​ನ ಫೋಟೋ ಪೋಸ್ಟ್ ಮಾಡಿಕೊಂಡ ಕಾಂಗ್ರೆಸ್ ನಾಯಕ ಮಾಣಿಕ್ಕಂ ಟಾಗೋರ್​,​ ‘ಪ್ರೀತಿಯ ನರೇಂದ್ರ ಮೋದಿ ಅವರೇ, ಹಿಮಂತ್​ ಬಿಸ್ವಾ ಶರ್ಮಾ ಯಾರಿಗೆ ಮೋಸ ಮಾಡುತ್ತಿದ್ದಾರೆ? ಅವರ ಟ್ರ್ಯಾಕ್​ ರೆಕಾರ್ಡ್​ಗಳು ಎಲ್ಲವನ್ನೂ ಹೇಳುತ್ತಿವೆ. ನೀವೆಲ್ಲ ಎಚ್ಚರಿಕೆಯಿಂದ ಇರಿ. ಹಿಮಂತ್​ ಬಿಸ್ವಾ ಶರ್ಮಾ ನಿಮಗೆ ವಂಚಿಸಲು ನೀವು ಅವಕಾಶ ಕೊಡುವುದಿಲ್ಲ ಎಂದು ನಾವು ಭಾವಿಸಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video | ಅಸ್ಸಾಮ್ ಸಿಎಂ ಮುಂದಿದ್ದ ಮೈಕ್ ಕಿತ್ತೆಸೆದ ತೆಲಂಗಾಣದ ವ್ಯಕ್ತಿ

Exit mobile version