ನವ ದೆಹಲಿ: ಎರಡು ದಿನಗಳಿಂದ ನಿರಂತರವಾಗಿ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಇಂದು (ಜೂ.15)ಮೂರನೇ ದಿನವೂ ಇಡಿ ವಿಚಾರಣೆಗೆ ಒಳಪಡಲಿದ್ದಾರೆ. ಇನ್ನೊಂದೆಡೆ ಎಐಸಿಸಿ ಪ್ರಧಾನ ಕಚೇರಿ ಸಮೀಪ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯೂ ಪ್ರಾರಂಭವಾಗಿದೆ. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಇ.ಡಿ. ಮುಷ್ಟಿಯಲ್ಲಿ ಸಿಲುಕಿರುವ ರಾಹುಲ್ ಗಾಂಧಿ ವಿಚಾರಣೆ ಜೂ.13ರಿಂದ ಶುರುವಾಗಿದ್ದು, ಇಲ್ಲಿಯವರೆಗೆ ಅವರು ಸುಮಾರು 80 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಆದರೆ ಅವರು ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುತ್ತಿರುವ ಕಾರಣ, ಸರಿಯಾದ ಹೇಳಿಕೆ ದಾಖಲು ಮಾಡಿಕೊಳ್ಳಲು ವಿಳಂಬವಾಗುತ್ತಿದೆ ಎಂದೂ ಹೇಳಲಾಗಿದೆ.
ಬಿಗಿ ಭದ್ರತೆ
ರಾಹುಲ್ ಗಾಂಧಿ ಇ.ಡಿ. ವಿಚಾರಣೆ ವಿರೋಧಿಸಿ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸೋಮವಾರದಿಂದಲೂ ಸತ್ಯಾಗ್ರಹ ಮೆರವಣಿಗೆ, ಧರಣಿ, ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹಲವು ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಕೂಡ ಪಡೆದಿದ್ದರು. ಇಂದು ಬೆಳಗ್ಗೆಯಿಂದಲೇ ಪ್ರತಿಭಟನೆ ಶುರುವಾದ ಹಿನ್ನೆಲೆಯಲ್ಲಿ ಪೊಲೀಸರು ಕಾಂಗ್ರೆಸ್ ಕಚೇರಿ ಸಮೀಪ ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ರಾಹುಲ್ ಗಾಂಧಿಯನ್ನು ಮೊದಲ ದಿನ 10 ತಾಸು ಮತ್ತು ಎರಡನೇ ದಿನ 11 ನೇ ತಾಸು ಒಟ್ಟು 21 ತಾಸುಗಳ ವಿಚಾರಣೆ ಮಾಡಿರುವ ಇಡಿ ಅಧಿಕಾರಿಗಳು ಇಂದು ಮತ್ತೆ ಕರೆದಿದ್ದಾರೆ. ಈ ಮಧ್ಯೆ ರಾಹುಲ್ ಗಾಂಧಿ ಅರೆಸ್ಟ್ ಆಗಲೂ ಬಹುದು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ. ಇಂದು ಇ.ಡಿ. ಕಚೇರಿಗೆ ಹೋಗುವ ಸಿದ್ಧತೆಯಲ್ಲಿರುವ ರಾಹುಲ್ ಗಾಂಧಿ ಮನೆಗೆ ಈಗಾಗಲೇ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಆಗಮಿಸಿದ್ದಾರೆ. ʼನಮಗೆ ಎಐಸಿಸಿ ಕಚೇರಿಯತ್ತ ಹೋಗಲೂ ದೆಹಲಿ ಪೊಲೀಸರು ಬಿಡುತ್ತಿಲ್ಲʼ ಎಂದು ಕಾಂಗ್ರೆಸ್ ಪ್ರಮುಖ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಅಶೋಕ್ ಗೆಹ್ಲೋಟ್, ಕೆ.ಸಿ.ವೇಣುಗೋಪಾಲ್ ಮತ್ತಿತರರು ಆರೋಪಿಸಿದ್ದಾರೆ. ʼನಾವು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿದರೂ ಅದಕ್ಕೆ ಪೊಲೀಸರು ತಡೆಯೊಡ್ಡುತ್ತಿದ್ದಾರೆ. ಈ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆʼ ಎಂದು ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಇಂದು ಮುಂದುವರಿಯಲಿರುವ ಇ.ಡಿ ವಿಚಾರಣೆ, ಕಾಂಗ್ರೆಸ್ ಗದ್ದಲ