Site icon Vistara News

Asaduddin Owaisi: ಹೈದರಾಬಾದ್‌ಗೆ ಬಂದು ಸ್ಪರ್ಧಿಸಿ ನೋಡೋಣ: ರಾಹುಲ್ ಗಾಂಧಿಗೆ ಓವೈಸಿ ಚಾಲೆಂಜ್

Rahul Gandhi And Asaduddin Owaisi

Contest elections from Hyderabad; Asaduddin Owaisi`s open challenge to Rahul Gandhi

ಹೈದರಾಬಾದ್:‌ ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳು ಲೋಕಸಭೆ ಚುನಾವಣೆಗೆ (Lok Sabha Election 2024) ಸಿದ್ಧವಾಗುತ್ತಿವೆ. ಮುಂದಿನ ವರ್ಷ ನಡೆಯುವ ಚುನಾವಣೆಗೆ ಈಗಿನಿಂದಲೇ ರಣತಂತ್ರ ರೂಪಿಸುತ್ತಿವೆ. ಹಾಗೆಯೇ, ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಮೇಲಾಟ, ಆರೋಪ, ಪ್ರತ್ಯಾರೋಪಗಳೂ ಆರಂಭವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ (Asaduddin Owaisi) ಅವರು ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಸವಾಲು ಹಾಕಿದ್ದಾರೆ. “ವಯನಾಡ್‌ ಅಲ್ಲ, ನನ್ನ ವಿರುದ್ಧ ಹೈದರಾಬಾದ್‌ನಲ್ಲಿ ಸ್ಪರ್ಧಿಸಲಿ” ಎಂದು ಓಪನ್‌ ಚಾಲೆಂಜ್‌ ಹಾಕಿದ್ದಾರೆ.

“ಕಾಂಗ್ರೆಸ್‌ ಪಕ್ಷವು ಬಿಜೆಪಿಯ ಅಂಗಪಕ್ಷವೆಂಬಂತೆ ವರ್ತಿಸುತ್ತಿದೆ. ನಾನು ನಿಮ್ಮ (ಕಾಂಗ್ರೆಸ್) ನಾಯಕ‌ ರಾಹುಲ್‌ ಗಾಂಧಿ ಅವರಿಗೆ ಸವಾಲು ಹಾಕುತ್ತೇನೆ. ಅವರು ವಯನಾಡ್‌ ಬದಲು ಹೈದರಾಬಾದ್‌ಗೆ ಬಂದು ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿ. ರಾಹುಲ್‌ ಗಾಂಧಿ ಅವರು ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತಾರೆ. ಆದರೆ, ಅವರು ಕಣಕ್ಕೆ ಇಳಿಯಲಿ, ನನ್ನ ವಿರುದ್ಧ ಸ್ಪರ್ಧಿಸಲಿ. ಇದು ನಾನು ಅವರಿಗೆ ಹಾಕುತ್ತಿರುವ ಸವಾಲು” ಎಂದು ಕಾರ್ಯಕ್ರಮವೊಂದರಲ್ಲಿ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಾಹುಲ್‌ ಗಾಂಧಿ ಅವರು ತೆಲಂಗಾಣದಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಎಐಎಂಐಎಂ ವಿರುದ್ಧ ಮಾತನಾಡಿದ್ದರು.

ಮಸೀದಿ ಕೆಡವಿದ್ದೇ ಕಾಂಗ್ರೆಸ್‌ ಅವಧಿಯಲ್ಲಿ

ಬಾಬ್ರಿ ಮಸೀದಿ ವಿಚಾರ ಪ್ರಸ್ತಾಪಿಸಿಯೂ ಅಸಾದುದ್ದೀನ್‌ ಓವೈಸಿ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. “ಕಾಂಗ್ರೆಸ್‌ ಅವಧಿಯಲ್ಲಿಯೇ ಬಾಬ್ರಿ ಮಸೀದಿಯನ್ನು ನೆಲಸಮ ಮಾಡಲಾಯಿತು. ಆದರೆ, ಕಾಂಗ್ರೆಸ್‌ ಸರ್ಕಾರ ಮಸೀದಿ ಕೆಡವಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆ ಪಕ್ಷದ ನಾಯಕರು ಮಾತ್ರ ತೆಲಂಗಾಣದಲ್ಲಿ ದೊಡ್ಡ ದೊಡ್ಡ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್‌ ಕೂಡ ಬಿಜೆಪಿಯಂತೆಯೇ ವರ್ತಿಸುತ್ತದೆ. ಹಾಗಾಗಿ, ನಾನೊಬ್ಬನೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಟ ಮಾಡುತ್ತಿದ್ದೇನೆ” ಎಂದು ಹೇಳಿದರು.

ಇದನ್ನೂ ಓದಿ: Uniform Civil Code: ಓವೈಸಿಗೆ ಕುರಾನ್‌ ಮುಖ್ಯ, ಸಂವಿಧಾನ ಅಲ್ಲ;‌ ಬಿಜೆಪಿಯ ಗೌರವ್‌ ಭಾಟಿಯಾ ಚಾಟಿ

ಸಂಸತ್ತಲ್ಲಿ ಮುಸ್ಲಿಮರ ಹತ್ಯೆ ಆದೀತು

ಕೆಲ ದಿನಗಳ ಹಿಂದೆ ಬಿಜೆಪಿ ಸಂಸದ ರಮೇಶ್‌ ಬಿಧುರಿ ಅವರು ಬಿಎಸ್‌ಪಿ ಸಂಸದ ಡ್ಯಾನಿಶ್‌ ಅಲಿ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರ ಕುರಿತು ಪ್ರತಿಕ್ರಿಯಿಸಿದ ಓವೈಸಿ, “ಮುಂದೊಂದು ದಿನ ಸಂಸತ್‌ನಲ್ಲಿಯೇ ಮುಸ್ಲಿಮರ ಹತ್ಯೆಯಾದರೂ ಆದೀತು” ಎಂದು ಹೇಳಿದ್ದಾರೆ. “ಜನರು ಆಯ್ಕೆ ಮಾಡಿ ಕಳುಹಿಸಿದ ಬಿಜೆಪಿ ಸಂಸದರೊಬ್ಬರು ಮತ್ತೊಂದು ಪಕ್ಷದ ಸಂಸದನ ಕುರಿತು ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಸಂಸತ್‌ನಲ್ಲೇ ಮುಸ್ಲಿಮರ ಹತ್ಯೆ ಮಾಡುವ ದಿನಗಳು ತುಂಬ ದೂರ ಇಲ್ಲ” ಎಂದಿದ್ದಾರೆ.

Exit mobile version