ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸೇವೆ/ಆಡಳಿತಗಳ ನಿಯಂತ್ರಣ ಯಾರಿಗೆ ಸೇರಿದ್ದು? ಕೇಂದ್ರ ಸರ್ಕಾರದ್ದೋ, ಸ್ಥಳೀಯ ಚುನಾಯಿತ ಸರ್ಕಾರದ್ದೊ ಎಂಬ ಪ್ರಶ್ನೆಯ ಕಾನೂನು ಹೋರಾಟದಲ್ಲಿ ಸುಪ್ರೀಂಕೋರ್ಟ್ (Supreme Court)ನಿಂದ ಒಂದು ಮಹತ್ವದ ತೀರ್ಪು ಹೊರಬಿದ್ದಿದೆ ಮತ್ತು ಅದು ಸ್ಥಳೀಯ ಆಮ್ ಆದ್ಮಿ ಸರ್ಕಾರ (AAP Government)ದ ಪರವಾಗಿ ಇದೆ. ಈ ವಿಚಾರದ ಬಗ್ಗೆ ಇಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ತೀರ್ಪು ಕೊಟ್ಟಿದೆ.
‘ದೆಹಲಿಯ ಕಾನೂನು ಸುವ್ಯವಸ್ಥೆ ಮತ್ತು ಭೂಮಿ ವಿಷಯವನ್ನು ಬಿಟ್ಟು, ಉಳಿದೆಲ್ಲ ಸೇವೆಗಳಿಗೆ ಸಂಬಂಧಪಟ್ಟ ಆಡಳಿತಾತ್ಮಕ ಅಧಿಕಾರ ಸ್ಥಳೀಯ ಪ್ರಜಾಪ್ರಭುತ್ವ ಸರ್ಕಾರದ್ದು’ ಎಂದು ಹೇಳಿದೆ. ಈ ಮೂಲಕ ಸ್ಥಳೀಯ ಸರ್ಕಾರದ ಮಹತ್ವವನ್ನು ಸಾರಿದೆ. ದೆಹಲಿಯಲ್ಲಿ ಚುನಾಯಿತ ಸರ್ಕಾರ ಇದ್ದಾಗ್ಯೂ ಎಲ್ಲ ಕ್ಷೇತ್ರಗಳಲ್ಲೂ ಲೆಫ್ಟಿನೆಂಟ್ ಗವರ್ನರ್, ಕೇಂದ್ರ ಸರ್ಕಾರವೇ ಆಡಳಿತ ನಡೆಸುವುದನ್ನು ವಿರೋಧಿಸಿ ಕಾನೂನು ಹೋರಾಟ ಶುರು ಮಾಡಿದ್ದ ಆಮ್ ಆದ್ಮಿ ಸರ್ಕಾರಕ್ಕೆ ಈಗ ಜಯ ಸಿಕ್ಕಂತಾಗಿದೆ.
ಇಂದು ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ‘ಯಾವುದೇ ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಸ್ವರೂಪದ ಸರ್ಕಾರವಿದ್ದಾಗ, ಅದರ ತೋಳಲ್ಲೇ ವಾಸ್ತವ ಅಧಿಕಾರ ಇರಬೇಕು. ಆ ಚುನಾಯಿತ ಸರ್ಕಾರವೇ ಆಡಳಿತವನ್ನು ನಿಯಂತ್ರಿಸಬೇಕು’ ಎಂದು ಹೇಳಿದ್ದಾರೆ. ‘ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾಯಿತಗೊಂಡ ಸರ್ಕಾರಕ್ಕೆ , ಅಧಿಕಾರಿಗಳನ್ನು ನಿಯಂತ್ರಿಸುವ ಅಧಿಕಾರ ಕೊಡದೆ ಇದ್ದರೆ, ಆ ಸರ್ಕಾರಕ್ಕೆ ಇರುವ ಸಾಮೂಹಿಕ ಜವಾಬ್ದಾರಿಯನ್ನು ದುರ್ಬಲಗೊಳಿಸಿದಂತೆ. ಅಧಿಕಾರಿಗಳು ಸಚಿವರಿಗೆ ಯಾವುದೇ ರೀತಿಯ ವರದಿಯನ್ನು ನೀಡುವುದನ್ನು ನಿಲ್ಲಿಸುವುದು ಆಡಳಿತದ ದೃಷ್ಟಿಯಿಂದ ಸರಿಯಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Delhi Mayor: ಇತ್ತೀಚೆಗಷ್ಟೇ ದೆಹಲಿ ಮೇಯರ್ ಗದ್ದುಗೆ ಏರಿದ್ದ ಶೆಲ್ಲಿ ಒಬೆರಾಯ್ ಮತ್ತೊಮ್ಮೆ ಮೇಯರ್ ಆಗಿ ಆಯ್ಕೆಯಾಗಿದ್ದೇಕೆ?
ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿದ್ದರಿಂದ ಅಲ್ಲಿ ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗವರ್ನರ್ರನ್ನು ನಿಯೋಜಿಸಿ, ಅವರ ಮೂಲಕ ತಾನೇ ಆಡಳಿತ ನಡೆಸುತ್ತದೆ. ಆದರೆ ಈ ಕ್ರಮದ ವಿರುದ್ಧ 2017ರಲ್ಲಿಯೇ ಆಪ್ ಸರ್ಕಾರ ಕಾನೂನು ಹೋರಾಟ ಪ್ರಾರಂಭ ಮಾಡಿತ್ತು. 2019ರಲ್ಲಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾ. ಎ.ಕೆ.ಸಿಕ್ರಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ವಿಚಾರವಾಗಿ ವಿಭಜಿತ ತೀರ್ಪು ಕೊಟ್ಟಿತ್ತು. ಅಂದರೆ ಅಶೋಕ್ ಭೂಷಣ್ ಅವರು ದೆಹಲಿ ಸೇವೆಗಳ ಮೇಲಿನ ನಿಯಂತ್ರಣ ಕೇಂದ್ರ ಸರ್ಕಾರಕ್ಕೆ ಸೇರಿದ್ದು ಎಂದು ಹೇಳಿದ್ದರು. ಆದರೆ ಇನ್ನೊಬ್ಬ ನ್ಯಾಯಮುರ್ತಿ ಸಿಕ್ರಿಯವರು ಇದಕ್ಕೆ ವಿರುದ್ಧವಾಗಿ ತೀರ್ಪು ಕೊಟ್ಟಿದ್ದರು. ಅದಾದ ಮೇಲೆ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ಆದರೆ 2021ರ ಮೇ 6ರಂದು ಈ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿತ್ತು. ಇದರ ನೇತೃತ್ವ ಸಿಜೆಐ ಡಿ.ವೈ.ಚಂದ್ರಚೂಡ್ ಅವರದ್ದಾಗಿತ್ತು.
ಅರವಿಂದ್ ಕೇಜ್ರಿವಾಲ್ರಿಂದ ಎಚ್ಚರಿಕೆ
ದೆಹಲಿಯ ಕಾನೂನು ಸುವ್ಯವಸ್ಥೆ ಮತ್ತು ಭೂಮಿ ವಿಷಯವನ್ನು ಬಿಟ್ಟು, ಉಳಿದೆಲ್ಲ ಸೇವೆಗಳಿಗೆ ಸಂಬಂಧಪಟ್ಟ ಆಡಳಿತಾತ್ಮಕ ಅಧಿಕಾರ ಸ್ಥಳೀಯ ಪ್ರಜಾಪ್ರಭುತ್ವ ಸರ್ಕಾರದ್ದು ಎಂದು ಸುಪ್ರೀಂಕೋರ್ಟ್ ಕೊಟ್ಟ ತೀರ್ಪನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದ್ದಾರೆ. ಹಾಗೇ, ಸೇವೆಗಳ ಮೇಲಿನ ನಿಯಂತ್ರಣ ಅಧಿಕಾರ ತಮ್ಮ ಕೈಯಿಗೆ ಬರುತ್ತಿದ್ದಂತೆ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಅಧಿಕಾರಿ ಸಾರ್ವಜನಿಕ ಕೆಲಸಕ್ಕೆ ಅಡ್ಡಿ ಮಾಡಿದರೆ, ಮಾತು ಕೇಳದೆ ಇದ್ದರೆ ಅವರ ವಿರುದ್ಧ ದೆಹಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಹಿಂದೆ ಲೆಫ್ಟಿನೆಂಟ್ ಗವರ್ನರ್ರಿಂದ ನಿಯೋಜಿತಗೊಂಡಿರುವ ದೆಹಲಿ ಸರ್ಕಾರಿ ಸೇವೆಗಳ ಇಲಾಖೆ ಕಾರ್ಯದರ್ಶಿ ಆಶಿಶ್ ಮೋರೆ ಅವರನ್ನು ಹುದ್ದೆಯಿಂದ ಕಿತ್ತು ಹಾಕಿದ್ದಾರೆ. ಇಂದು ಸುಪ್ರೀಂಕೋರ್ಟ್ನಿಂದ ಹೊರಬಿದ್ದ ತೀರ್ಪಿನ ಅನ್ವಯ ಅಧಿಕಾರಿಗಳ ವರ್ಗಾವಣೆ, ನೇಮಕಾತಿ ಅಧಿಕಾರ ದೆಹಲಿ ಸರ್ಕಾರಕ್ಕೆ ಸೇರಿದೆ.