ನವ ದೆಹಲಿ: ಟಿಬೆಟಿಯನ್ ಬೌದ್ಧ ಧರ್ಮಗುರು ದಲೈ ಲಾಮಾ ಅವರು ಬಾಲಕನೊಬ್ಬನ ತುಟಿಗೆ ಮುತ್ತಿಟ್ಟಿದ್ದಲ್ಲದೆ, ತಮ್ಮ ನಾಲಿಗೆಯನ್ನು ಚೀಪುವಂತೆ ಆ ಹುಡುಗನಿಗೆ ಹೇಳಿದ ವಿಡಿಯೊವೊಂದು ಕಳೆದ ಒಂದು ತಿಂಗಳಿಂದಲೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ ಮತ್ತು ದಲೈ ಲಾಮಾ ನಡವಳಿಕೆ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲೈಲಾಮಾ ಅವರು ಅತ್ಯಂತ ಅಸಹ್ಯವಾಗಿ, ಗಲೀಜು ಎನ್ನಿಸುವಂತೆ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ.
ಅದ್ಯಾವುದೋ ಧಾರ್ಮಿಕ ಕಾರ್ಯಕ್ರಮದಲ್ಲಿ ದಲೈ ಲಾಮಾ ಪಾಲ್ಗೊಂಡಿದ್ದಾರೆ. ಕುರ್ಚಿಯಲ್ಲಿ ಕುಳಿತ ಅವರಿಗೆ ನಮಿಸಲೆಂದು ಬಾಲಕನೊಬ್ಬ ಬಂದು ಅವರ ಎದುರು ನಿಂತಿದ್ದಾನೆ. ಆ ಬಾಲಕನ ಗಲ್ಲವನ್ನು ಹಿಡಿದ ದಲೈಲಾಮಾ ಅವನ ತುಟಿಗೆ ಚುಂಬಿಸುತ್ತಾರೆ. ಬಳಿಕ ಹುಡುಗನ ಹಣೆಗೆ ತಮ್ಮ ಹಣೆಯನ್ನು ತಾಗಿಸುತ್ತಾರೆ. ಅದಾದ ಮೇಲೆ ಅವರು ನಾಲಿಗೆಯನ್ನು ಹೊರಚಾಚಿ, ‘ನೀನು ನನ್ನ ನಾಲಿಗೆಯನ್ನು ಚೀಪುವೆಯಾ’ ಎಂದು ಬಾಲಕನ ಬಳಿ ಕೇಳುತ್ತಾರೆ. ದಲೈಲಾಮಾ ಬಾಲಕನ ಎದುರು ಹೀಗೆ ವರ್ತಿಸುವಾಗ ಒಂದಷ್ಟು ಚಪ್ಪಾಳೆ, ನಗುವಿನ ಧ್ವನಿಯೂ ವಿಡಿಯೊದಲ್ಲಿ ಕೇಳುತ್ತದೆ’
ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅನೇಕರು ಕಿಡಿಕಾರಿದ್ದಾರೆ. ದೀಪಿಕಾ ಪುಷ್ಕರ್ನಾಥ್ ಎಂಬುವರು ಟ್ವೀಟ್ ಮಾಡಿ ‘ದಲೈ ಲಾಮಾ ಹೀಗೆ ಮಾಡಿದ್ದು ನಿಜಕ್ಕೂ ಅಸಹ್ಯಕರ. ಇಂಥದ್ದನ್ನೆಲ್ಲ ಯಾರೂ ಸಮರ್ಥನೆ ಮಾಡಲೇಬಾರದು’ ಎಂದಿದ್ದಾರೆ. ಹಾಗೇ, ಪ್ರವೀಣ್ ತೋನ್ಸೇಖರ್ ಎಂಬುವರು ಟ್ವೀಟ್ ಮಾಡಿ ‘ದಲೈಲಾಮಾ ಅವರ ಬಗ್ಗೆ ಇದ್ದ ಗೌರವ ಎಲ್ಲ ನಾಶವಾಯಿತು. ಪಾಪ ಆ ಬಾಲಕನಿಗೆ ಅದೆಷ್ಟು ಗಲೀಜು ಎನ್ನಿಸಿರಬಹುದು’ ಎಂದಿದ್ದಾರೆ. ‘ಇದು ಖಂಡಿತ ನರಕಸದೃಶ. ಇದು ಕ್ರೈಂ ಅಲ್ಲವೇ? ಈ ಬಗ್ಗೆ ಹೆಚ್ಚಿನ ವಿಚಾರಣೆ ಅಗತ್ಯ’ ಎಂದು ಸಂಗೀತಾ ಮುರಳಿ ಎಂಬುವರು ಹೇಳಿದ್ದಾರೆ.
ಅದರ ಮಧ್ಯೆ Drew Pavlou ಎಂಬುವರು ಬಿಬಿಸಿಯೊಂದು ಈ ಹಿಂದೆ ಬರೆದಿದ್ದ ಆರ್ಟಿಕಲ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ‘ಟಿಬೆಟ್ನಲ್ಲಿ ನಾಲಿಗೆಯನ್ನು ಹೊರಚಾಚುವುದು ಪರಸ್ಪರ ಗ್ರೀಟ್ ಮಾಡಿಕೊಳ್ಳುವ ಒಂದು ವಿಧಾನ. 9 ನೇ ಶತಮಾನದಿಂದಲೂ ಇದು ಚಾಲ್ತಿಯಲ್ಲಿದೆ. ಆಗ ಲಾಂಗ್ ದರ್ಮಾ ಎಂಬ ರಾಜನಿದ್ದ. ಆತ ರಾಕ್ಷಸೀ ಗುಣಗಳನ್ನು ಹೊಂದಿದ್ದು, ಕಪ್ಪದಾದ ನಾಲಿಗೆ ಹೊಂದಿದ್ದ. ಅವನು ಸತ್ತ ಬಳಿಕ ಪುನರ್ಜನ್ಮ ತಾಳಿದ್ದಾನೆ ಎಂದು ಅಲ್ಲಿನ ಜನ ನಂಬಿದ್ದರು. ಇದೇ ಕಾರಣಕ್ಕೆ ನಾಲಿಗೆಯನ್ನು ಹೊರಚಾಚಿ ತಮ್ಮ ಎದುರಿಗಿನ ವ್ಯಕ್ತಿಗಳಿಗೆ ತೋರಿಸುವ ಮೂಲಕ, ತಾವು ಆ ದುಷ್ಟ ರಾಜನ ಪುನರ್ಜನ್ಮ ಅಲ್ಲ ಎಂದು ಹೇಳುತ್ತಿದ್ದರು. ಆದರೆ ಬರುಬರುತ್ತ ಅದು ಸಂಪ್ರದಾಯವಾಗಿ ಬೆಳೆದುಹೋಯಿತು’ ಎಂಬುದು ಆ ಲೇಖನದ ಸಾರಾಂಶ. ಆದರೆ ನಾಲಿಗೆಯನ್ನು ಚೀಪುವ ಸಂಸ್ಕೃತಿ ಇದೆ ಎಂಬ ಬಗ್ಗೆ ಉಲ್ಲೇಖವಿಲ್ಲ.
ಈ ಹಿಂದೆಯೂ ವಿವಾದ!
ದಲೈ ಲಾಮಾ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. 2019ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತ ‘ನನ್ನ ನಂತರ ಈ ಬೌದ್ಧ ಗುರುವಿನ ಸ್ಥಾನಕ್ಕೆ ಒಬ್ಬಳು ಮಹಿಳೆ ಬರಬೇಕು ಮತ್ತು ಆಕೆ ಅತ್ಯಂತ ಸುಂದರವಾಗಿ, ಆಕರ್ಷಕವಾಗಿ ಇರಬೇಕು’ ಎಂದು ಹೇಳಿದ್ದರು. ದಲೈಲಾಲಾ ಈ ಮಾತು ಸಿಕ್ಕಾಪಟೆ ವಿವಾದ ಸೃಷ್ಟಿಸಿತ್ತು. ಅನೇಕರು ಅವರನ್ನು ಟೀಕಿಸಿದ್ದರು. ಅದರ ಬೆನ್ನಲ್ಲೇ ಕ್ಷಮೆ ಕೋರಿದ್ದರು.