Site icon Vistara News

Bilkis Bano Case | ಬಿಲ್ಕೀಸ್​ ಬಾನೋ ರೇಪ್​ ಕೇಸ್​​ನ 11 ಆರೋಪಿಗಳು ಬಿಡುಗಡೆ; ಓವೈಸಿ ಆಕ್ರೋಶ

Bilkis Bano

ನವ ದೆಹಲಿ: ಗುಜರಾತ್​​ನಲ್ಲಿ 2002ರಲ್ಲಿ ನಡೆದ ಗೋದ್ರಾ ಗಲಾಟೆ ವೇಳೆ ಬಿಲ್ಕೀಸ್ ಬಾನೋ ಎಂಬುವರ ಮೇಲೆ ಸಾಮೂಹಿಕ ಅತ್ಯಾಚಾರ (Bilkis Bano Case) ಆಗಿತ್ತು. ಈ ರೇಪ್​ ಕೇಸ್​​​ನ 11 ಆರೋಪಿಗಳನ್ನೂ ಈ ಸಲದ ಸ್ವಾತಂತ್ರ್ಯ ದಿನಾಚರಣೆಯಂದು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಸುಮಾರು 15ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಹೊರಬಂದವರಿಗೆ, ಇವರ ಬಂಧುಗಳು, ಸ್ನೇಹಿತರು ಸಂತೋಷದಿಂದ ಸ್ವಾಗತ ಕೋರಿದ್ದಾರೆ. ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಆ ವಿಡಿಯೋ, ಫೋಟೋಗಳು ಕೂಡ ವೈರಲ್ ಆಗುತ್ತಿವೆ. ಅತ್ಯಾಚಾರ ಆರೋಪಿಗಳಿಗೆ ಕ್ಷಮಾದಾನ ನೀಡಿ, ಅವರನ್ನು ಬಿಡುಗಡೆ ಮಾಡಿದ ಗುಜರಾತ್​ ಬಿಜೆಪಿ ಸರ್ಕಾರದ ಕ್ರಮವನ್ನು ಕಾಂಗ್ರೆಸ್​ ಟೀಕಿಸಿದೆ. ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದೆ.

ಗುಜರಾತ್​​ನಲ್ಲಿ 2002ರಲ್ಲಿ ಗೋದ್ರಾ ಹತ್ಯಾಕಾಂಡವಾದ ಸಮಯ. ಸುತ್ತಮುತ್ತಲಿನ ಹಳ್ಳಿಗಳಲ್ಲೆಲ್ಲ ಗಲಭೆ-ಗಲಾಟೆ ಪ್ರಾರಂಭವಾಗಿತ್ತು. ಆ ಸಮಯದಲ್ಲಿ ಅನೇಕರು ತಮ್ಮ ಹಳ್ಳಿಗಳನ್ನು ಬಿಟ್ಟು ಸಿಕ್ಕ ವಾಹನ ಹಿಡಿದು ಪರಾರಿಯಾಗಿದ್ದರು. ಆಗ ಬಿಲ್ಕೀಸ್​ ಬಾನೋ ಐದು ತಿಂಗಳ ಗರ್ಭಿಣಿ. ಆಕೆಯೂ ಸಹ ತನ್ನ ಮೊದಲ, ಪುಟ್ಟ ಮಗಳು ಮತ್ತು ಕುಟುಂಬದ ಇತರ 15 ಜನರೊಂದಿಗೆ ಊರು ಬಿಟ್ಟು ಹೊರಟಿದ್ದರು. ಮಧ್ಯದಾರಿಯಲ್ಲಿ 20-30 ಜನರ ಗುಂಪೊಂದು ಇವರನ್ನೆಲ್ಲ ತಡೆದು, ಅಟ್ಯಾಕ್​ ಮಾಡಿದ್ದಲ್ಲದೆ, ಬಿಲ್ಕೀಸ್​ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು. ಅಷ್ಟೇ ಅಲ್ಲ ಮೊದಲು ಮಗು ಸೇರಿ, ಆಕೆಯ ಕುಟುಂಬದ ಏಳು ಮಂದಿಯನ್ನು ಹತ್ಯೆಯನ್ನೂ ಮಾಡಿದರು. ಉಳಿದ ಆರು ಜನ ಅದು ಹೇಗೋ ಪರಾರಿಯಾಗಿದ್ದರು.

ಈ ಅತ್ಯಾಚಾರ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಕೇಸ್​ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿತ್ತು. 2004ರಲ್ಲಿ ಎಲ್ಲ 19 ಆರೋಪಿಗಳನ್ನೂ ಬಂಧಿಸಲಾಗಿತ್ತು. ಗರ್ಭಿಣಿ ಮೇಲೆ ಅತ್ಯಾಚಾರ ಮಾಡಿ, ಆಕೆಯ ಕುಟುಂಬದ 7 ಮಂದಿಯನ್ನು ಹತ್ಯೆಗೈದ ಆರೋಪದಡಿ 2008ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಸರಿಯಾದ ಸಾಕ್ಷಿಗಳಿಲ್ಲದ ಕಾರಣ ಏಳು ಮಂದಿಯನ್ನು ಖುಲಾಸೆ ಗೊಳಿಸಿತು ಮತ್ತು ಒಬ್ಬಾತ ವಿಚಾರಣೆ ಅವಧಿಯಲ್ಲೇ ಮೃತಪಟ್ಟಿದ್ದ.

ಇಂದು ಬಿಡುಗಡೆಯಾದ 11 ಮಂದಿ ಯಾರು?
ಜೀವಾವಧಿ ಶಿಕ್ಷೆ ಇದ್ದರೂ, ಸರ್ಕಾರದಿಂದ ಕ್ಷಮಾದಾನ ಪಡೆದ ಆರೋಪಿಗಳು: ರಾಜುಭಾಯ್​ ಸೋನಿ, ರಾಧೇಶ್ಯಾಮ್​ ಶಾ, ಕೇಸರ್​ಭಾಯ್​ ವೊಹಾನಿಯಾ, ಶೈಲೇಶ್​ ಭಟ್​, ಬಿಪಿನ್​ ಚಂದ್ರ ಜೋಶಿ, ಬಕಾಭಾಯಿ ವೋಹಾನಿಯಾ, ರಮೇಶ್​ ಚಂದ್ರನಾ, ಪ್ರದೀಪ್ ಮೋರ್ಧಿಯಾ, ಜಸ್ವಂತ್ ಭಾಯ್ ನಾಯ್, ಮಿತೇಶ್ ಭಟ್, ಗೋವಿಂದಭಾಯಿ ನಾಯ್.

ಆಕ್ರೋಶ ವ್ಯಕ್ತಪಡಿಸಿದ ಓವೈಸಿ
ಅತ್ಯಾಚಾರ ಆರೋಪಿಗಳನ್ನು ಬಿಡುಗಡೆ ಮಾಡಿದ್ದಕ್ಕೆ, ‘ಬಿಜೆಪಿ ದೃಷ್ಟಿಕೋನದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಎಂದರೇನು ಎಂಬುದಕ್ಕೆ ಈ ಅತ್ಯಾಚಾರ ಆರೋಪಿಗಳ ಬಿಡುಗಡೆಯೇ ಸಾಕ್ಷಿ. ಒಬ್ಬ ಗರ್ಭಿಣಿಯ ಮೇಲೆ ಅತ್ಯಾಚಾರ ಮಾಡಿದವರನ್ನು ಇಂದು ಬಿಡುಗಡೆ ಮಾಡಿ, ಅವರಿಗೆ ಸ್ವಾತಂತ್ರ್ಯ ನೀಡಲಾಗಿದೆ. ಅತ್ಯಾಚಾರ-ಕೊಲೆ ಕೇಸ್​​ಗಳ ಆರೋಪಿಗಳ ವಿಚಾರದಲ್ಲೂ ಪಕ್ಷಪಾತ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪತಿ ಹೇಳೋದೇನು?
ಬಿಲ್ಕೀಸ್ ಬಾನೋ ಅತ್ಯಾಚಾರ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ ಬೆನ್ನಲ್ಲೇ ಅವರ ಪತಿ ಯಾಕೂಬ್ ರಸುಲ್​ ಪ್ರತಿಕ್ರಿಯೆ ನೀಡಿ, ‘ಸದ್ಯಕ್ಕೇನೂ ನಾವು ಈ ಬಗ್ಗೆ ಮಾತಾಡೋದಿಲ್ಲ. ಅಂದಿನ ಘಟನೆಯಲ್ಲಿ ಸಾವನ್ನಪ್ಪಿದ ನಮ್ಮ ಹತ್ತಿರದವರ ಆತ್ಮ ಶಾಂತಿಯಲ್ಲಿ ನೆಲೆಸಿರಲಿ ಎಂದು ಪ್ರಾರ್ಥಿಸುತ್ತೇವೆ. ಅಂದು ಹತ್ಯೆಗೀಡಾದ ನನ್ನ ಮಗಳೂ ಸೇರಿ, ಪ್ರತಿಯೊಬ್ಬರನ್ನೂ ಪ್ರತಿದಿನ ನೆನಪಿಸಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ಬಿಲ್ಕೀಸ್ ಬಾನೋರಿಗೆ ಈಗ ಐವರು ಗಂಡು ಮಕ್ಕಳಿದ್ದಾರೆ.

ಇದನ್ನೂ ಓದಿ: ಗುಜರಾತ್‌ ಗಲಭೆ ಕೇಸ್‌ನಲ್ಲಿ ನರೇಂದ್ರ ಮೋದಿಗೆ ಕ್ಲೀನ್‌ ಚಿಟ್‌ ಕೊಟ್ಟಿದ್ದ ಸುಪ್ರೀಂ ನ್ಯಾಯಮೂರ್ತಿ ನಿವೃತ್ತಿ

Exit mobile version