Site icon Vistara News

ಶಾಲೆಯಲ್ಲಿ ಹುಡುಗಿಯರು ಬಡಿಸಿದ್ದ ಊಟವನ್ನು ಬಿಸಾಕುವಂತೆ ಮಕ್ಕಳಿಗೆ ಹೇಳಿದ ಅಡುಗೆಯವ ಅರೆಸ್ಟ್​

ಶಿಕ್ಷಕರ ಬಂಧನ

ರಾಜಸ್ಥಾನದ ಉದಯ್​​ಪುರ ಜಿಲ್ಲೆಯ ಬರೋಡಿ ಏರಿಯಾದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಅಡುಗೆ ಮಾಡುವವನನ್ನು ಪೊಲೀಸರು ಬಂಧಿಸಿದ್ದಾರೆ. ತಾನು ತಯಾರಿಸಿದ ಅಡುಗೆಯನ್ನು ದಲಿತ ಸಮುದಾಯಕ್ಕೆ ಸೇರಿದ ಹೆಣ್ಣು ಮಕ್ಕಳು ಎಲ್ಲರಿಗೂ ಬಡಿಸಿದ್ದನ್ನು ವಿರೋಧಿಸಿದ ಅಡುಗೆಯಾತ ಮಕ್ಕಳ ಬಳಿ ‘ಬಟ್ಟಲಿಗೆ ಬಡಿಸಿದ ಊಟವನ್ನು ಎಸೆಯಿರಿ, ಅದು ದಲಿತರು ಮುಟ್ಟಿದ್ದು’ ಎಂದು ಹೇಳಿದ್ದ. ಅವನ ಮಾತು ಕೇಳಿದ ಮಕ್ಕಳೆಲ್ಲ ತಮ್ಮ ಊಟವನ್ನು ಬೀಸಾಡಿದ್ದರು. ಹೀಗೆ ಜಾತಿ ವಿಚಾರವನ್ನು ಮುಖ್ಯವಾಗಿಟ್ಟುಕೊಂಡು ತಾರತಮ್ಯ ಮಾಡಿದ ಆರೋಪದಡಿ ಅಡುಗೆಯವನಾದ ಲಾಲಾ ರಾಮ್ ಗುಜಾರ್​​ನನ್ನು ಬಂಧಿಸಲಾಗಿದೆ.

ತಾವು ಬಡಿಸಿದ ಅಡುಗೆಯನ್ನು ಎಸೆದಿದ್ದಕ್ಕೆ ಆ ದಲಿತ ಹೆಣ್ಣು ಮಕ್ಕಳಿಬ್ಬರೂ ನೋವು ಪಟ್ಟಿದ್ದರು. ತಮ್ಮ-ತಮ್ಮ ಮನೆಗೆ ಬಂದು ತುಂಬ ಬೇಸರದಿಂದ ಈ ವಿಷಯ ಹೇಳಿಕೊಂಡಿದ್ದರು. ಬಳಿಕ ಹುಡುಗಿಯರ ಮನೆಯವರು, ಸಂಬಂಧಿಕರೆಲ್ಲ ಮರುದಿನ ಶಾಲೆಗೆ ಬಂದು, ಅಡುಗೆಯವನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಯಾವಾಗಲೂ ಈ ಲಾಲಾ ರಾಮ್​, ಅಡುಗೆಯನ್ನು ಎಲ್ಲರಿಗೂ ಬಡಿಸಲು ಮೇಲ್ಜಾತಿಯ ಹುಡುಗ/ ಹುಡುಗಿಯರಿಗೇ ಹೇಳುತ್ತಿದ್ದ. ಆದರೆ ಅಂದು ಶಿಕ್ಷಕರೊಬ್ಬರು ಮುಂದಾಗಿ ಇಬ್ಬರು ದಲಿತ ಹುಡುಗಿಯರ ಬಳಿ ಎಲ್ಲರಿಗೂ ಊಟ ಬಡಿಸುವಂತೆ ಹೇಳಿದ್ದರು. ಶಿಕ್ಷಕರ ಎದುರು ಏನೂ ಹೇಳದ ಅಡುಗೆಯವ, ಆಮೇಲೆ ಮಕ್ಕಳಿಗೆ ಹೇಳಿ ಊಟ ಬಿಸಾಕಿಸಿದ್ದ. ಸದ್ಯ ಆತನ ವಿರುದ್ಧ ಗೋಗುಂಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಲಿತ ವಿದ್ಯಾರ್ಥಿನಿಯರು ಮಾಡಿದ ಆರೋಪ ಸತ್ಯ ಎಂದು ಸಾಬೀತಾಗಿದ್ದರಿಂದ ತ್ವರಿತವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಮುರುಘಾಶ್ರೀ ಪ್ರಕರಣ| ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಜತೆಗೆ ದಲಿತ ದೌರ್ಜನ್ಯ ಕೇಸ್‌ ಕೂಡಾ ದಾಖಲು

Exit mobile version