ಖಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈಗೆರಡು ದಿನಗಳ ಹಿಂದೆ ಪಂಜಾಬ್ನ ನಾಕೋಡರ್ ಬಳಿ ಅಮೃತ್‌ಪಾಲ್ (Amritpal Singh)ಅರೆಸ್ಟ್ ಆದ ಎಂದು ವರದಿಯಾಗಿತ್ತು. ಆದರೆ ಬಳಿಕ ಹೇಳಿಕೆ ಬಿಡುಗಡೆ ಮಾಡಿದ್ದ ಪಂಜಾಬ್ ಪೊಲೀಸರು ಇಲ್ಲ, ಅಮೃತ್‌ಪಾಲ್ ಪರಾರಿಯಾಗಿದ್ದಾನೆ, ಅವನ ಆರು ಮಂದಿ ಸಹಚರರನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು. ಈಗೆರಡು ದಿನಗಳಿಂದಲೂ ಅಮೃತ್ಪಾಲ್ಗಾಗಿ ಶೋಧ ಮುಂದುವರಿದಿದೆ. ಅದರ ಮಧ್ಯೆ ಇಂದು ಆತ ಪರಾರಿಯಾಗಲು ಬಳಸಿದ್ದ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಾಕೋಡರ್ ಬಳಿ ಪೊಲೀಸರು ತನ್ನನ್ನು ಅರೆಸ್ಟ್ ಮಾಡಲು ಬಂದಾಗ ಅಮೃತ್‌ಪಾಲ್ ಸಿಂಗ್ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿ ಜಲಂಧರ್ ಜಿಲ್ಲೆಯ ನಾಂಗಲ್ ಅಂಬೈನ್ ಎಂಬ ಗ್ರಾಮದಲ್ಲಿ ಅಡಗಿಕೊಂಡಿದ್ದ. ಮತ್ತೆ ಅಲ್ಲಿ ತನ್ನ ಉಡುಪನ್ನು ಬದಲಿಸಿಕೊಂಡು, ಅಂದರೆ ಯಾವಾಗಲೂ ಹಾಕುವ ಕುರ್ತಾವನ್ನು ಬಿಟ್ಟು, ಪಾಶ್ಚಾತ್ಯ ಉಡುಗೆ ತೊಟ್ಟು ಪ್ಲಾಟಿನಾ ಬೈಕ್ನಲ್ಲಿ ಪರಾರಿಯಾಗಿದ್ದ. ಅದೂ ಕೂಡ ಅದನ್ನು ಓಡಿಸಿದವರು ಬೇರೆ. ಈತ ಹಿಂದೆ ಕುಳಿತಿದ್ದ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು. ಇದೀಗ ಪೊಲೀಸರು ಅಮೃತ್‌ಪಾಲ್ ಪರಾರಿಯಾಗಲು ಬಳಸಿದ್ದ ಬೈಕ್ನ್ನು ವಶಪಡಿಸಿಕೊಂಡಿದ್ದಾರೆ. ಇದು ಜಲಂಧರ್ನಿಂದ 45 ಕಿಮೀ ದೂರದಲ್ಲಿರುವ ದಾರಾಪುರ್ ಏರಿಯಾದಲ್ಲಿ ಪತ್ತೆಯಾಗಿದೆ. ದಾರಾಪುರ್ನಲ್ಲಿರುವ ಒಂದು ನಿರ್ಜನ ಪ್ರದೇಶದಲ್ಲಿ, ಒಂದು ಕಾಲುವೆಯ ದಡದ ಮೇಲೆ ಬೈಕ್ ನಿಂತಿತ್ತು. ಅದನ್ನು ಪತ್ತೆ ಮಾಡಿದ ಪೊಲೀಸರು ತೆಗೆದುಕೊಂಡು ಬಂದಿದ್ದಾರೆ.
ಇದನ್ನೂ ಓದಿ: Amritpal Singh: ಖಲಿಸ್ತಾನಿ ಉಗ್ರ ಅಮೃತ್‌ಪಾಲ್ ಸಿಂಗ್ ಬಳಿ ಸ್ವಂತ ಮಿಲಿಟರಿ, ಬಾಂಬ್ ಸ್ಕ್ವಾಡ್!
ಅಮೃತ್ಪಾಲ್ನ ವಾರಿಸ್ ಪಂಜಾಬ್ ದೇ ಸಂಘಟನೆಯ ಸುಮಾರು 154 ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನೂ ಸುಮಾರು 500 ಮಂದಿ ಇದರಲ್ಲಿ ಇದ್ದಿರಬಹುದು ಎನ್ನಲಾಗಿದೆ. ಅಮೃತ್‌ಪಾಲ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪಂಜಾಬ್ ಪೊಲೀಸ್ ವಕ್ತಾರ ಐಜಿ ಸುಖ್ಚೈನ್ ಸಿಂಗ್ ಗಿಲ್ ಹೇಳಿದ್ದಾರೆ. ಆತನ ಬಂಧನಕ್ಕೆ ಏನೇನು ಬೇಕೋ, ಎಲ್ಲವನ್ನೂ ಮಾಡಿದ್ದಾರೆ. ಅಮೃತ್ಪಾಲ್ನ ಹಳೆಯ, ಈಗಿನ ಫೋಟೋಗಳನ್ನೂ ಬಿಡುಗಡೆ ಮಾಡಿದ್ದಾರೆ. ಈಗ ತನ್ನನ್ನು ತಾನು ಬಂಧನದಿಂದ ತಪ್ಪಿಸಿಕೊಳ್ಳಲು ಆತ ರೂಪದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಅಮೃತ್‌ಪಾಲ್ ಬಳಸುತ್ತಿದ್ದ ಮಾರುತಿ ಬ್ರೆಜ್ಜ ಕಾರನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ.