ನವ ದೆಹಲಿ: ಉತ್ತರ ಪ್ರದೇಶದ ಮಥುರಾ ಶ್ರೀಕೃಷ್ಣ ಜನ್ಮಭೂಮಿ ಹಾಗೂ ಶಾಹಿ ಈದ್ಗಾ ಮಸೀದಿ ವಿವಾದ ಕೇಸ್ಗೆ ಸಂಬಂಧಪಟ್ಟಂತೆ ಮಥುರಾ ಜಿಲ್ಲಾ ನ್ಯಾಯಾಲಯ ಇಂದು ಒಂದು ಮಹತ್ವದ ಆದೇಶ ಹೊರಡಿಸಿದೆ. ಈದ್ಗಾ ಮಸೀದಿ ಸಂಕೀರ್ಣದ ಅಧಿಕೃತ ಸಮೀಕ್ಷೆ ನಡೆಸುವಂತೆ ಕೋರ್ಟ್ ಆದೇಶ ಕೊಟ್ಟಿದ್ದು, ಮುಂದಿನ ವಿಚಾರಣೆ ದಿನಾಂಕವನ್ನು 2023ರ ಜನವರಿ 20ಕ್ಕೆ ನಿಗದಿಗೊಳಿಸಿದೆ.
ಈಗ ಶಾಹಿ ಈದ್ಗಾ ಮಸೀದಿ ಇರುವ ಜಾಗವೇ ಶ್ರೀಕೃಷ್ಣನ ವಾಸ್ತವ ಜನ್ಮಸ್ಥಳ. ಮೊಘಲ್ ದೊರೆ ಔರಂಗಜೇಬನ ಕಾಲದಲ್ಲಿ ಅಲ್ಲಿದ್ದ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಲಾಗಿದೆ. ಇಲ್ಲಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೂಚಿಸಬೇಕು ಎಂದು ಕೆಲವು ಹಿಂದು ಮುಖಂಡರು ಮೇ ತಿಂಗಳಲ್ಲೇ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಲಹಾಬಾದ್ ಹೈಕೋರ್ಟ್ ಈ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲು ನಿರಾಕರಿಸಿತ್ತು. ‘ಶ್ರೀಕೃಷ್ಣ ಜನ್ಮಭೂಮಿ-ಈದ್ಗಾ ಮಸೀದಿ ಕೇಸ್ನ್ನು ಮಥುರಾ ಜಿಲ್ಲಾ ನ್ಯಾಯಾಲಯವೇ ವಿಚಾರಣೆ ನಡೆಸಿ, ನಾಲ್ಕು ತಿಂಗಳಲ್ಲಿ ಸೂಕ್ತ ಆದೇಶ ನೀಡಬೇಕು’ ಎಂದು ಹೇಳಿತ್ತು. ಅದರಂತೆ ಅರ್ಜಿಗಳ ವಿಚಾರಣೆ ನಡೆಸಿದ ಮಥುರಾ ಜಿಲ್ಲಾ ನ್ಯಾಯಾಲಯದ ಸಿವಿಲ್ ಜಡ್ಜ್, ‘ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಿ 2023ರ ಜನವರಿ 20ರೊಳಗೆ ವರದಿ ಸಲ್ಲಿಸಬೇಕು’ ಎಂದು ಹೇಳಿದ್ದಾರೆ.
ಮಥುರಾ ಪರಿಸ್ಥಿತಿ ಹೇಗಿದೆ?
ಶ್ರೀಕೃಷ್ಣಜನ್ಮಭೂಮಿಯ ಸನ್ನಿವೇಶ ಅಯೋಧ್ಯೆಯಷ್ಟು ಜಟಿಲವಾಗಿಲ್ಲ. ಆದರೆ ತುಂಬಾ ಸರಳವೂ ಆಗಿಲ್ಲ. ʼಕತ್ರಾ ದಿಬ್ಬʼ ಅಥವಾ ʼಕತ್ರಾ ಕೇಶವದಾಸ್ʼ ಎಂದು ಕರೆಯಲಾಗುವ ಸುಮಾರು 13.39 ಎಕರೆ ವಿಸ್ತೀರ್ಣದ ದಿಬ್ಬದ ಮೇಲೆ ಶ್ರೀಕೃಷ್ಣ ಜನ್ಮಭೂಮಿ ಸಂಕೀರ್ಣ ನಿಂತಿದೆ. ಈ ದೇವಾಲಯದ ಪಕ್ಕದಲ್ಲಿ ಶಾಹಿ ಈದ್ಗಾ ಮಸೀದಿ ಇದೆ. ಮೊದಲು ಇದ್ದ ಕೇಶವದಾಸ ದೇವಾಲಯವನ್ನು ನಾಶ ಮಾಡಿ ಇದನ್ನು ಕ್ರಿಸ್ತಶಕ 1670ರಲ್ಲಿ ಮೊಗಲ್ ದೊರೆ ಔರಂಗಜೇಬ್ ನಿರ್ಮಿಸಿದ್ದ.
ಧಾರ್ಮಿಕ ಕ್ರಿಯೆಗಳಿಗಾಗಿ ಇರುವ ಮಂಟಪದ ಮೇಲೆ ಈದ್ಗಾ ನಿರ್ಮಿಸಲಾಗಿದೆ. ಆದರೆ ಶ್ರೀಕೃಷ್ಣನ ಜನ್ಮದ ಸ್ಥಳ ಎಂದು ನಂಬಲಾಗಿರುವ, ಮೊದಲು ಇದ್ದ ಗರ್ಭಗುಡಿ ಹಾಗೆಯೇ ಇದ್ದು, ಇಂದೂ ಅಲ್ಲಿಯೇ ಪೂಜೆ ಸಲ್ಲಿಸಲಾಗುತ್ತಿದೆ. ಈ ಗರ್ಭಗುಡಿ ಈದ್ಗಾದ ಗೋಡೆಗೆ ಒತ್ತಿಕೊಂಡು ಇದೆ.
1950ರಲ್ಲಿ ಉದ್ಯಮಿಗಳಾದ ರಾಮಕೃಷ್ಣ ದಾಲ್ಮಿಯಾ, ಹನುಮಾನ್ ಪ್ರಸಾದ್ ಪೋದ್ದಾರ್ ಮತ್ತು ಜುಗಲ್ ಕಿಶೋರ್ ಬಿರ್ಲಾ ಅವರು ಈ ಜಾಗವನ್ನು ಖರೀದಿಸಿ, ಇಲ್ಲಿ ಭವ್ಯವಾದ ಕೇಶವದಾಸ ದೇವಾಲಯವನ್ನು ನಿರ್ಮಿಸಿದರು. ನಿರ್ವಹಣೆಗಾಗಿ ಶ್ರೀಕೃಷ್ಣ ಜನ್ಮಸ್ಥಾನ ಟ್ರಸ್ಟ್ ರಚಿಸಿದರು. ಪಕ್ಕದ ಈದ್ಗಾ ಮಸೀದಿಯ ಜೊತೆಗೆ ಇದ್ದ ತಗಾದೆಗಳನ್ನು ಕೋರ್ಟ್ ಜೊತೆಗೆ ಪರಿಹರಿಸಿಕೊಂಡರು. 1968ರಲ್ಲಿ ಮಾಡಿಕೊಂಡ ಒಪ್ಪಂದ ಸ್ಪಷ್ಟವಾಗಿ ಹೇಳುವಂತೆ, ಶ್ರೀಕೃಷ್ಣ ಜನ್ಮಸ್ಥಾನ ಹಾಗೂ ಶಾಹಿ ಈದ್ಗಾ ಮಸೀದಿಯ ಜಾಗದ ನಡುವೆ ಜಮೀನು ತಗಾದೆ ಇಲ್ಲ. ಪ್ರಸ್ತುತ ಎದ್ದಿರುವ ವಿವಾದ ಜಮೀನಿಗೆ ಸಂಬಂಧಿಸಿದ್ದಲ್ಲ. ಅದು ಸಂಪೂರ್ಣ ಧಾರ್ಮಿಕ- ರಾಜಕೀಯ ಹಿನ್ನೆಲೆಯದ್ದಾಗಿದೆ.
ಇದನ್ನೂ ಓದಿ: Krishna Janmabhoomi | 4 ತಿಂಗಳಲ್ಲಿ ಕೃಷ್ಣ ಜನ್ಮಭೂಮಿ ಸಮೀಕ್ಷೆ ಕುರಿತು ಆದೇಶಿಸಿ, ಮಥುರಾ ಕೋರ್ಟ್‌ಗೆ ಸೂಚನೆ