ಭೋಪಾಲ್: ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂದುಬಿಡಿ ಎಂದು ಹೇಳಿಕೆ ನೀಡಿದ್ದ ಮಧ್ಯಪ್ರದೇಶ ಕಾಂಗ್ರೆಸ್ ನಾಯಕ, ಮಾಜಿ ಸಚಿವ ರಾಜಾ ಪಟೇರಿಯಾ (Raja Pateria) ಅವರ ಜಾಮೀನು ಅರ್ಜಿಯನ್ನು ಗ್ವಾಲಿಯರ್ ಎಂಪಿ-ಎಂಎಲ್‌ಎ ಕೋರ್ಟ್ ತಿರಸ್ಕರಿಸಿದೆ. ಹಾಗಾಗಿ, ರಾಜಾ ಪಟೇರಿಯಾ ಅವರಿಗೆ ಜೈಲೇ ಗತಿಯಾಗಿದೆ.
ಡಿಸೆಂಬರ್ 11ರಂದು ರಾಜಾ ಪಟೇರಿಯಾ ಅವರು ಮೋದಿ ವಿರುದ್ಧ ನೀಡಿದ್ದ ಪ್ರಚೋದನಾತ್ಮಕ ಹೇಳಿಕೆಯು ಆಕ್ರೋಶಕ್ಕೀಡಾಗಿತ್ತು. ಬಳಿಕ ಪ್ರಕರಣವೂ ದಾಖಲಾಗಿ ಅವರನ್ನು ಬಂಧಿಸಲಾಗಿತ್ತು. ಈಗ ಜಾಮೀನು ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಸಿದ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮಹೇಂದ್ರ ಸೋನಿ ಜಾಮೀನು ನಿರಾಕರಿಸಿದರು.
ಪಟೇರಿಯಾ ಹೇಳಿದ್ದೇನು?
“ನರೇಂದ್ರ ಮೋದಿ ಅವರು ಚುನಾವಣೆಗಳನ್ನೇ ಕೊನೆಗಾಣಿಸುತ್ತಾರೆ. ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಜನರನ್ನು ಒಡೆಯುತ್ತಾರೆ. ದಲಿತರು, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರ ಜೀವನವು ಈಗಾಗಲೇ ಅಪಾಯದಲ್ಲಿದೆ. ಹಾಗಾಗಿ, ಸಂವಿಧಾನವನ್ನು ಉಳಿಸಲು ಮೋದಿ ಅವರನ್ನು ಹತ್ಯೆ ಮಾಡಲು ಎಲ್ಲರೂ ಸಿದ್ಧರಾಗಿರಬೇಕು” ಎಂದು ಕರೆ ನೀಡಿದ್ದರು.
ಇದನ್ನೂ ಓದಿ | ಸಂವಿಧಾನ ಉಳಿಸಲು ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿ ಎಂದು ಕರೆಕೊಟ್ಟ ಕಾಂಗ್ರೆಸ್ ಮಾಜಿ ಸಚಿವ ಬಂಧನ