ನವ ದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು (Covid-19 Cases) ಅತಿವೇಗದಿಂದ ಹೆಚ್ಚುತ್ತಿವೆ. ನಿನ್ನೆ 2,151 ಕೊರೊನಾ ಕೇಸ್ಗಳು ದಾಖಲಾಗಿದ್ದವು. ಇಂದು ನಿನ್ನೆಗಿಂತಲೂ ಶೇ.40ರಷ್ಟು ಏರಿಕೆ ಕಂಡಿದೆ. 24ಗಂಟೆಯಲ್ಲಿ 3,016 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಆರು ತಿಂಗಳಲ್ಲೇ ಇದು ಅತ್ಯಂತ ಹೆಚ್ಚು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೈನಂದಿನ ಪಾಸಿಟಿವಿಟಿ ರೇಟ್ ಶೇ. 1.51 ಇದ್ದಿದ್ದು, ಈಗ ಶೇ. 2.7ಕ್ಕೆ ಜಿಗಿದಿದೆ. ವಾರದ ಪಾಸಿಟಿವಿಟಿ ಪ್ರಮಾಣ ಶೇ. 1.71ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ದೈನಂದಿನವಾಗಿ ದಾಖಲಾಗುವ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಅಂದರೆ ಸುಮಾರು 13,509 ಮಂದಿ ಸೋಂಕಿತರು ಇನ್ನೂ ಚಿಕಿತ್ಸೆಯ ಹಂತದಲ್ಲಿದ್ದಾರೆ. ಕೊರೊನಾದಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ.98.78ರಷ್ಟಿದೆ. ಹಾಗೇ, ಕಳೆದ 24ಗಂಟೆಯಲ್ಲಿ ಕೊರೊನಾದಿಂದ 24ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಿಂದಲೂ ಒಂದು ದಿನಕ್ಕೆ 4-7 ಮಂದಿ ಸತ್ತಿದ್ದಾಗಿ ವರದಿಯಾಗುತ್ತಿತ್ತು. ನಿನ್ನೆ ಮಾ.29ರಂದು ಕೂಡ ಏಳು ಮಂದಿ ಸೋಂಕಿನಿಂದ ಮೃತಪಟ್ಟಿದ್ದರು. ಅದಿಂದು ದ್ವಿಗುಣಗೊಂಡಿದೆ. ಮಹಾರಾಷ್ಟ್ರದಲ್ಲಿ ಮೂವರು, ದೆಹಲಿಯಲ್ಲಿ ಇಬ್ಬರು, ಹಿಮಾಚಲ ಪ್ರದೇಶದಲ್ಲಿ ಒಬ್ಬರು ಮತ್ತು ಕೇರಳದಲ್ಲಿ 8 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 5,30,862ಕ್ಕೆ ತಲುಪಿದೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 4.47 ಕೋಟಿ (4,47,12,692).
ಇದನ್ನೂ ಓದಿ: Covid-19 Cases: ದೇಶದಲ್ಲಿ ಮತ್ತೆ ಕೊವಿಡ್ ಆತಂಕ; 146 ದಿನಗಳಲ್ಲೇ ಗರಿಷ್ಠ ಮಟ್ಟದ ಕೊರೊನಾ ಕೇಸ್ ದಾಖಲು
ದೆಹಲಿ ಸರ್ಕಾರದಿಂದ ಸಭೆ
ಕೊರೊನಾ ಸೋಂಕಿನ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಸಭೆ ಆಯೋಜಿಸಿದೆ. ಇಂದು ಒಂದೇ ದಿನ 300 ಕೇಸ್ಗಳು ದಾಖಲಾದ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ ಸಚಿವರಾದ ಸೌರಭ್ ಭಾರದ್ವಾಜ್ ಅವರು ಇಂದು ತುರ್ತು ಸಭೆ ಕರೆದಿದ್ದಾರೆ. ಕೊವಿಡ್ 19 ಸನ್ನಿವೇಶವನ್ನು ಪರಿಶೀಲನೆ ಮಾಡಿ, ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳು, ಆಸ್ಪತ್ರೆಗಳ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ. ದೆಹಲಿಯಲ್ಲಿ ಕೂಡ ಕೊರೊನಾ ಹೆಚ್ಚಳವಾಗುತ್ತಿದ್ದು, ಅಲ್ಲಿನ ಪಾಸಿಟಿವಿಟಿ ರೇಟ್ ಶೇ.13.89ರಷ್ಟಿದೆ.
ಕೊವಿಡ್ 19 ಲಕ್ಷಣಗಳೇನು?
ಕೊರೊನಾ ವೈರಸ್ನ ಸಾಮಾನ್ಯ ಲಕ್ಷಣಗಳು ಜ್ವರ, ಒಣಕೆಮ್ಮು, ಸುಸ್ತು, ರುಚಿ ಮತ್ತು ವಾಸನೆ ಗೊತ್ತಾಗದೆ ಇರುವುದು, ಮೂಗು ಕಟ್ಟುವುದು, ಕಣ್ಣು ಕೆಂಪಾಗುವುದು, ಗಂಟಲು ನೋವು, ಉಸಿರಾಟದಲ್ಲಿ ಸಮಸ್ಯೆ, ತಲೆನೋವು, ಸ್ನಾಯು/ ಕೀಲು ನೋವು, ಚರ್ಮದ ಮೇಲೆ ಕೆಂಪಾದ ದದ್ದು ಉಂಟಾಗುವುದು, ವಾಕರಿಕೆ/ವಾಂತಿ, ಅತಿಸಾರ, ಚಳಿ ಮತ್ತು ತಲೆ ಸುತ್ತು. ಕೊವಿಡ್ ಹಿಂದಿನ ಅಲೆಗಳಲ್ಲಿ ಸಾಮಾನ್ಯವಾಗಿ ಕಂಡು ಬಂದ ಲಕ್ಷಣಗಳು ಇವಾಗಿದ್ದು, ಇಂಥ ಲಕ್ಷಣಗಳು ಈಗ ಕಂಡುಬಂದರೆ ಕೊವಿಡ್ 19 ಟೆಸ್ಟ್ಗೆ ಒಳಗಾಗಲು ಆರೋಗ್ಯ ಇಲಾಖೆ ಶಿಫಾರಸ್ಸು ಮಾಡಿದೆ. ಹಾಗೇ, ದೇಶದಲ್ಲಿ ಇನ್ನೊಂದೆಡೆ ಎಚ್3ಎನ್2 ಮತ್ತು ಇತರ ಕೆಲವು ಸೋಂಕಿನ ಜ್ವರ ಕೂಡ ಪ್ರಾರಂಭವಾಗಿದ್ದು, ಅದರ ಲಕ್ಷಣಗಳೂ ಕೊವಿಡ್ 19 ಲಕ್ಷಣವನ್ನು ಹೋಲುತ್ತದೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದೆ.