ನವ ದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ಕೇಸ್‌ಗಳ (Covid 19 Cases In India) ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ 4041 ಕೊರೊನಾ ಕೇಸ್‌ಗಳು ದಾಖಲಾಗಿದ್ದವು. ಕಳೆದ 84 ದಿನಗಳಲ್ಲಿ ಒಂದು ದಿನದಲ್ಲಿ ಇಷ್ಟು ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿರಲಿಲ್ಲ. ನಿನ್ನೆಗೆ ಹೋಲಿಸಿದರೆ ಇಂದು ತುಸು ಕಡಿಮೆ ಅಂದರೆ 3,962 ಕೊವಿಡ್ ಕೇಸ್‌ಗಳು ಪತ್ತೆಯಾಗಿವೆ. ಹೀಗೆ ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಿರುವುದರಲ್ಲಿ ಸಿಂಹಪಾಲು ಮಹಾರಾಷ್ಟ್ರ, ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ರಾಜ್ಯಗಳದ್ದೇ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನು ದೇಶದಲ್ಲಿ 24ಗಂಟೆಯಲ್ಲಿ ದೈನಂದಿನ ಪಾಸಿಟಿವಿಟಿ ರೇಟ್ ಶೇ.0.77ರಷ್ಟು ದಾಖಲಾಗಿದ್ದು, ವಾರದ ಪಾಸಿಟಿವಿಟಿ ರೇಟ್ 0.89 ಇದೆ.
ಹೀಗೆ ಕೊರೊನಾ ಹೆಚ್ಚುತ್ತಿರುವ ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದಾರೆ. ಕೊರೊನಾ ಸ್ಥಿತಿಗತಿಯ ಮೇಲೆ ಕಣ್ಣಿಡಬೇಕು. ಕೊರೊನಾ ಉತ್ತುಂಗಕ್ಕೆ ಹೋಗುವ ಮೊದಲು ಅದರ ನಿಯಂತ್ರಣಕ್ಕೆ ಪೂರ್ವಭಾವಿ ಕ್ರಮ ಕೈಗೊಳ್ಳಬೇಕು. ಸೋಂಕಿನ ಹರಡುವಿಕೆ ತಡೆಗಟ್ಟಲು ಯಾವುದೇ ಅಗತ್ಯ ನಿರ್ಬಂಧಗಳನ್ನು ಹೇರಬಹುದು ಎಂದು ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ವಿರುದ್ಧ ಹೋರಾಟದಲ್ಲಿ ಇಷ್ಟರವರೆಗೆ ನಾವು ಗಳಿಸಿದ ಯಶಸ್ಸು ಸುಮ್ಮನೆ ವ್ಯರ್ಥವಾಗಬಾರದು. ಹಾಗಾಗಿ ಈಗಿನಿಂದಲೇ ಕೊರೊನಾ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲು ಶುರು ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: Char Dham ಯಾತ್ರಾ ಸಾವುಗಳಿಗೆ ಕೋವಿಡ್ ಕಾರಣವೇ?
ಕಳೆದ ಮೂರು ತಿಂಗಳಿನಿಂದ ಭಾರತದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿತ್ತು. ಆದರೆ ಈಗ ಮತ್ತೆ ನಿಧಾನವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಜನರ ಗುಂಪುಗೂಡುವಿಕೆ ನಿರ್ಬಂಧಿಸುವುದು, ಟೆಸ್ಟಿಂಗ್, ವ್ಯಾಕ್ಸಿನೇಶನ್, ಚಿಕಿತ್ಸೆಗಳನ್ನು ಚುರುಕುಗೊಳಿಸಬೇಕು. ಆರೋಗ್ಯ ಸಚಿವಾಲಯದ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ. ಹಾಗೇ, ಯಾವ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಲ್ಲಿ ಕೊವಿಡ್ 19 ಪಾಸಿಟಿವಿಟಿ ದರ ಏರಿಕೆಯಾಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿದ್ದು, ಅದರ ಅನ್ವಯ ಕೇರಳದ 11, ತಮಿಳುನಾಡಿನ 2, ಮಹಾರಾಷ್ಟ್ರದ 6, ತೆಲಂಗಾಣದ ಒಂದು ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಏರುತ್ತಿದೆ.
ಮಹಾರಾಷ್ಟ್ರದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ
ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚುತ್ತಿರುವ ಬೆನ್ನಲ್ಲೇ ಮತ್ತೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಕಳೆದ ಮೂರು ದಿನಗಳಿಂದಲೂ ಮಹಾರಾಷ್ಟ್ರದಲ್ಲಿ ಒಂದು ದಿನದಲ್ಲಿ 1000ಕ್ಕೂ ಹೆಚ್ಚು ಕೊರೊನಾ ಕೇಸ್‌ಗಳು ಪತ್ತೆಯಾಗುತ್ತಿವೆ. ಕೊರೊನಾ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಕೇಂದ್ರದ ಸೂಚನೆಯಂತೆ ಎಲ್ಲ ರಾಜ್ಯಗಳೂ ಕೊರೊನಾ ನಿರ್ಬಂಧಗಳನ್ನು ತೆಗೆದುಹಾಕಿದ್ದವು. ಮಾಸ್ಕ್ ಕಡ್ಡಾಯವಾಗಿ ಧರಿಸಿ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ, ಕೆಲವು ರಾಜ್ಯಗಳಲ್ಲಿ ಅದರಲ್ಲೂ ಸಡಿಲಿಕೆ ಮಾಡಿದ್ದವು. ಮಾಸ್ಕ್ ಹಾಕದೆ ಇದ್ದರೆ ದಂಡ ವಿಧಿಸುವುದಿಲ್ಲ ಎಂದು ಹೇಳಿದ್ದವು. ಅದರಲ್ಲಿ ಮಹಾರಾಷ್ಟ್ರವೂ ಒಂದು. ಆದರೆ ಅಲ್ಲೀಗ ಕೊರೊನಾ ಮತ್ತೆ ಅಧಿಕವಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.
ಎಲ್ಲ ಜಿಲ್ಲಾಧಿಕಾರಿಗಳು, ಮುನ್ಸಿಪಲ್ ಕಾರ್ಪೋರೇಶನ್‌ಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿರುವ ರಾಜ್ಯ ಸರ್ಕಾರಿ ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಪ್ರದೀಪ್ ವ್ಯಾಸ, ಎಲ್ಲ ಜಿಲ್ಲೆಗಳಲ್ಲೂ ಆರ್‌ಟಿ-ಪಿಸಿಆರ್ ತಪಾಸಣೆ ಕನಿಷ್ಠ ಶೇ.60ರಷ್ಟಾದರೂ ಇರುವಂತೆ ಗಮನಹರಿಸಿ ಎಂದು ಹೇಳಿದ್ದಾರೆ. ರೈಲು, ಬಸ್, ಸಿನಿಮಾ ಹಾಲ್‌ಗಳು, ಅಡಿಟೋರಿಯಂ, ಕಚೇರಿಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳಲ್ಲಿ ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಬೇಕಾಗುತ್ತದೆ. ಇನ್ನು ತೆರೆದ ಪ್ರದೇಶದಲ್ಲಿ, ಜನಜಂಗುಳಿ ಹೆಚ್ಚಾಗಿ ಇಲ್ಲದ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಲ್ಲ. ಆದರೂ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Quad Summit 2022: ಪ್ರಧಾನಿ ಮೋದಿಯನ್ನು ಹೊಗಳಿ, ಚೀನಾವನ್ನು ಟೀಕಿಸಿದ ಅಮೆರಿಕ ಅಧ್ಯಕ್ಷ