Site icon Vistara News

ಕೊರೊನಾ ವೈರಸ್‌ 4ನೇ ಅಲೆ ಭೀತಿ; ಇಂದು 5 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

Covid 19

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ನಾಲ್ಕನೇ ಅಲೆ (Covid-19 fourth wave in India) ಶುರುವಾಗುತ್ತಿದೆಯಾ? ಹೀಗೊಂದು ಆತಂಕ ಕಾಡುತ್ತಿದೆ. ದೈನಂದಿನವಾಗಿ ದಾಖಲಾಗುವ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದೇ ಈ ಆತಂಕಕ್ಕೆ ಕಾರಣ. ಇಂದು (ಬುಧವಾರ) ದೇಶದಲ್ಲಿ ಬರೋಬ್ಬರಿ 5233 ಹೊಸ ಕೊರೊನಾ ಸೋಂಕಿನ ಕೇಸ್‌ಗಳು ದಾಖಲಾಗಿವೆ. ಇದು ಮಂಗಳವಾರಕ್ಕಿಂತ ಶೇ.41ರಷ್ಟು ಹೆಚ್ಚು. ಕಳೆದ 93 ದಿನಗಳಲ್ಲಿ (ಮೂರು ತಿಂಗಳು) ದೈನಂದಿನ ಪ್ರಕರಣದ ಸಂಖ್ಯೆ ಹೀಗೆ 5000ರ ಗಡಿ ದಾಟಿರಲಿಲ್ಲ. ಈ ಮೂಲಕ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4,31,90,282ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳು 28,857ಕ್ಕೆ ತಲುಪಿವೆ.

ಹಾಗೇ, 24 ಗಂಟೆಯಲ್ಲಿ ಕೊರೊನಾದಿಂದ ಏಳು ಮಂದಿ ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 5,24,715 ಆಗಿದೆ. ದೇಶದಲ್ಲಿ ಈಗ ಕೊವಿಡ್‌ 19 ಸಾವಿನ ರೇಟ್‌ 1.21ರಷ್ಟಿದೆ. ಮತ್ತೊಂದೆಡೆ ಚೇತರಿಕೆ ಪ್ರಮಾಣ ಶೇ.98.72ರಷ್ಟಿದೆ. ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದರೂ ಅದರಲ್ಲಿ ಹೆಚ್ಚಿನ ಪಾಲು ಮಹಾರಾಷ್ಟ್ರ, ದೆಹಲಿ, ಕೇರಳ, ದೆಹಲಿ, ಕರ್ನಾಟಕ ಮತ್ತು ಹರ್ಯಾಣದ್ದೇ ಆಗಿದೆ. ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 1,881, ಕೇರಳದಲ್ಲಿ 1,494, ದೆಹಲಿ 450, ಕರ್ನಾಟಕದಲ್ಲಿ 348 ಮತ್ತು ಹರ್ಯಾಣದಲ್ಲಿ 277 ಸೋಂಕಿತರು ಪತ್ತೆಯಾಗಿದ್ದಾರೆ. ಅಂದರೆ ಒಟ್ಟಾರೆ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಶೇ.84.08ರಷ್ಟು ಈ ಐದು ರಾಜ್ಯಗಳಿಂದಲೇ ವರದಿಯಾಗಿದ್ದು, ಅದರಲ್ಲೂ ಮಹಾರಾಷ್ಟ್ರದಲ್ಲೇ ಶೇ. 35.94ರಷ್ಟು ಸೋಂಕಿತರು ಇದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಮತ್ತೊಂದೆಡೆ ದೇಶದಲ್ಲಿ ಕೊರೊನಾ ತಪಾಸಣೆ, ಕೊವಿಡ್‌ 19 ಲಸಿಕೆ ನೀಡಿಕೆಯೂ ವೇಗವಾಗಿ ನಡೆಯುತ್ತಿದೆ. 24ಗಂಟೆಯಲ್ಲಿ 3,13,361 ಜನರನ್ನು ಕೊವಿಡ್‌ ತಪಾಸಣೆಗೆ ಒಳಪಡಿಸಲಾಗಿದೆ. ಹಾಗೇ, ಇಲ್ಲಿಯವರೆಗೆ ಒಟ್ಟು 194.43 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. 12-14ವರ್ಷದ ಸುಮಾರು 3.46 ಕೋಟಿ ಮಕ್ಕಳಿಗೆ ಒಂದು ಲಸಿಕೆ ಒಂದು ಡೋಸ್‌ ನೀಡಿಕೆಯಾಗಿದೆ ಎಂದೂ ಸಚಿವಾಲಯ ತಿಳಿಸಿದೆ. ಅಂದಹಾಗೇ, ಈ ವಯಸ್ಸಿನವರಿಗೆ ಮಾರ್ಚ್‌ 16ರಿಂದ ಲಸಿಕೆ ಕೊಡಲಾಗುತ್ತಿದೆ.

ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗಿದ್ದ ಹಿನ್ನೆಲೆಯಲ್ಲಿ ಎಲ್ಲ ನಿರ್ಬಂಧಗಳನ್ನೂ ತೆಗೆದುಹಾಕಲಾಗಿತ್ತು. ಕೆಲವು ರಾಜ್ಯಗಳಂತೂ ಮಾಸ್ಕ್‌ ಕೂಡ ಕಡ್ಡಾಯವಲ್ಲ ಎಂದಿದ್ದರು. ಆದರೆ ಈಗದರ ಬಿಸಿ ಗೊತ್ತಾಗುತ್ತದೆ. ಮತ್ತೆ ಹೊಸದಾಗಿ ಕೊರೊನಾ ಸೋಂಕಿನಲ್ಲಿ ಹೆಚ್ಚಳ ಕಂಡುಬರುತ್ತಿದ್ದು, ಅಗತ್ಯ ನಿರ್ಬಂಧಗಳನ್ನು ಹೇರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಈಗಾಗಲೇ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು; ಈ ಐದು ರಾಜ್ಯಗಳದ್ದೇ ಸಿಂಹಪಾಲು

Exit mobile version