ಭಾರತದಲ್ಲಿ ಕಳೆದ 24ಗಂಟೆಯಲ್ಲಿ 3824 ಕೊವಿಡ್ 19 ಕೇಸ್ಗಳು ದಾಖಲಾಗಿವೆ (Covid 19 Updates). ನಿನ್ನೆ ಶನಿವಾರ 2995 ಕೊರೊನಾ ಕೇಸ್ಗಳು ದಾಖಲಾಗಿದ್ದವು. ನಿನ್ನೆಗಿಂತಲೂ ಇಂದು ಶೇ.28ರಷ್ಟು ಹೆಚ್ಚಾಗಿದೆ. ಶುಕ್ರವಾರ 3095 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಅದಾದ ಮೇಲೆ ಶನಿವಾರ ತುಸು ಕಡಿಮೆ ಎನ್ನಿಸಿತು. ಆದರೆ ಇಂದು 4 ಸಾವಿರದ ಸಮೀಪಿಸಿದೆ. ದೇಶದಲ್ಲಿ ಮತ್ತೀಗ ಕೊವಿಡ್ 19 ಸೋಂಕಿನ ಆತಂಕ ಶುರುವಾಗಿದೆ.
ದೇಶದಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 18,389. ಅಂದರೆ ಇಷ್ಟು ಜನ ಇನ್ನೂ ಚಿಕಿತ್ಸೆಯ ಹಂತದಲ್ಲಿದ್ದಾರೆ. ದೇಶದ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ4,47,22,605ಕ್ಕೆ ಏರಿಕೆಯಾಗಿದೆ. ಹಾಗೇ, ಕಳೆದ 24ಗಂಟೆಯಲ್ಲಿ 1784 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲಿಗೆ ದೇಶದಲ್ಲಿ ಕೊವಿಡ್ 19 ನಿಂದ ಗುಣಮುಖರಾದವರ ಸಂಖ್ಯೆ 4,41,73,335. ಆದರೂ ಇತ್ತೀಚೆಗೆ ಕೊರೊನಾ ತೀವ್ರತರ ಏರಿಕೆಯಾಗುತ್ತಿದ್ದು ದೈನಂದಿನ ಪಾಸಿಟಿವಿಟಿ ರೇಟ್ 2.87ಕ್ಕೆ ಮತ್ತು ವಾರದ ಪಾಸಿಟಿವಿಟಿ ರೇಟ್ ಶೇ.2.24ಕ್ಕೆ ಏರಿಕೆಯಾಗಿದ್ದು ಆತಂಕ ತಂದಿದೆ. ಹಾಗೇ, ಚೇತರಿಕೆ ಪ್ರಮಾಣ ಶೇ.98.77 ಇದ್ದು, ಮರಣದ ರೇಟ್ ಶೇ.1.19ರಷ್ಟಿದೆ. ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,30,881 ಎಂದು ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.
ಕೊರೊನಾ ವೈರಸ್ನ XBB.1.16 ರೂಪಾಂತರಿಯಿಂದಾಗಿ ಈಗ ಕೊವಿಡ್ ಪ್ರಸರಣ ಮತ್ತೆ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಸಮಾಧಾನಕರ ಸಂಗತಿಯೇನೆಂದರೆ, ಈ ರೂಪಾಂತರಿ ಸೌಮ್ಯ ಲಕ್ಷಣವನ್ನು ಉಂಟು ಮಾಡುತ್ತದೆ. ಕೊರೊನಾ ಸೋಂಕಿನ ಪ್ರಸರಣ ಹೆಚ್ಚುತ್ತಿದ್ದರೂ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಸಾವಿನ ಸಂಖ್ಯೆ ಕಡಿಮೆ ಇದೆ ಎಂದು ತಿಳಿಸಿರುವ ವಿಜ್ಞಾನಿಗಳು, ಆರೋಗ್ಯ ತಜ್ಞರು, ‘ಭಾರತೀಯರು ಬಹುತೇಕರು ಬೂಸ್ಟರ್ ಡೋಸ್ ಕೂಡ ಪಡೆದುಯಾಗಿದೆ. ಹೀಗಾಗಿ ಅವರಲ್ಲಿ ಕೊರೊನಾ ವಿರುದ್ಧ ಹೋರಾಡಲು ಅಗತ್ಯವಿರುವ ಹೈಬ್ರೀಡ್ ಪ್ರತಿರೋಧಕ ಶಕ್ತಿ ಉತ್ಪತ್ತಿಯಾಗಿದ್ದರಿಂದ ಭಯಗೊಳ್ಳುವ ಅಗತ್ಯವಿಲ್ಲ. ಆದರೂ ಸೋಂಕು ಪ್ರಸರಣ ವೇಗ ಹೆಚ್ಚುತ್ತಿರುವುದರಿಂದ ಎಚ್ಚರಿಕೆಯಿಂದ ಇರಬೇಕು. ಕೊವಿಡ್ 19 ನಿರ್ಬಂಧ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ. ಹಾಗೇ, ಇನ್ನೂ ಯಾರಾದರೂ ಮೂರನೇ ಡೋಸ್ ಲಸಿಕೆ (ಬೂಸ್ಟರ್ ಡೋಸ್) ಪಡೆದಿರದೆ ಇದ್ದರೆ, ಕೂಡಲೇ ಪಡೆದುಕೊಳ್ಳಿ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಕೊವಿಡ್ 19 ಲಸಿಕೆ 4ನೇ ಡೋಸ್ ಅಗತ್ಯವಿದೆಯಾ?; ಆರೋಗ್ಯ ತಜ್ಞ ಡಾ. ಡಾ. ರಮಣ್ ಗಂಗಾಖೇಡ್ಕರ್ ಏನು ಹೇಳ್ತಾರೆ?
ಕೊರೊನಾ ಹೆಚ್ಚಳದ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ‘ಪ್ರತಿ ರಾಜ್ಯದಲ್ಲೂ ಆಯಾ ಆರೋಗ್ಯ ಇಲಾಖೆಗಳು ಕಾರ್ಯಪ್ರವೃತ್ತವಾಗಬೇಕು. ಜಿಲ್ಲಾ, ಉಪಜಿಲ್ಲಾ ಮಟ್ಟ ಅಂದರೆ ತಳಮಟ್ಟದಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲನೆ ಮಾಡಬೇಕು. ಕೊವಿಡ್ 19 ಸೋಂಕು ಹರಡುವಿಕೆ ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಗಳಲ್ಲಿ ಎಲ್ಲ ವ್ಯವಸ್ಥೆಗಳೂ ಸೂಕ್ತವಾಗಿದ್ದು, ಯಾವುದೇ ತುರ್ತು ಪರಿಸ್ಥಿತಿ ನಿರ್ವಹಿಸಲು ಸನ್ನದ್ಧರಾಗಿರಬೇಕು’ ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.