Site icon Vistara News

ನಿಮಗೆ 18 ವರ್ಷ ಆಗಿದೆಯೆ? ಜುಲೈ 15ರಿಂದ ಕೋವಿಡ್‌ ಲಸಿಕೆ ಬೂಸ್ಟರ್‌ ಡೋಸ್‌ ಉಚಿತ

Covid 19 Booster dose

ನವ ದೆಹಲಿ: 18-59 ವರ್ಷದವರಿಗೂ ಕೊವಿಡ್‌ 19 ಲಸಿಕೆ ಬೂಸ್ಟರ್‌ ಡೋಸ್‌ನ್ನು ಜುಲೈ 15 ರಿಂದ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಇಂದು ಘೋಷಣೆ ಮಾಡಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಚರಣೆ ಮಾಡುತ್ತಿರುವ ʼಆಜಾದಿ ಕಾ ಅಮೃತ್‌ ಮಹೋತ್ಸವ್‌ʼ ನಿಮಿತ್ತ, ಜುಲೈ 15ರಿಂದ 75 ದಿನಗಳವರೆಗೆ ಬೂಸ್ಟರ್‌ ಡೋಸ್‌ ಉಚಿತ ಲಸಿಕೆ ವಿತರಣೆ ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ. ಅಂದಹಾಗೇ, ದೇಶದಲ್ಲಿ 60 ವರ್ಚ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ನ್ನು ಈಗಾಗಲೇ ಉಚಿತವಾಗಿ ನೀಡಲಾಗುತ್ತಿದೆ. ಮುಂದಿನ ಎರಡೂವರೆ ತಿಂಗಳು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಈ ಸೌಲಭ್ಯ ಸಿಗಲಿದೆ.

ಕೊರೊನಾ ಲಸಿಕೆ ಎರಡನೇ ಡೋಸ್‌ ಪಡೆದು 9 ತಿಂಗಳು ಪೂರ್ಣಗೊಂಡವರು ಎಲ್ಲರೂ 3ನೇ ಡೋಸ್‌ ಪಡೆಯಲು ಅರ್ಹರು ಎಂದು ಕೇಂದ್ರ ಸರ್ಕಾರ ಮೊದಲು ಹೇಳಿತ್ತು. ಎರಡು ಮತ್ತು ಮೂರನೇ ಡೋಸ್‌ ನಡುವಿನ ಅಂತರದ ಅವಧಿಯನ್ನು ಕಳೆದ ವಾರ ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. 9 ರಿಂದ 6 ತಿಂಗಳಿಗೆ ಇಳಿಸಿದೆ. ಅಂದರೆ ಕೊವಿಡ್‌ 19 ಲಸಿಕೆ 2ನೇ ಡೋಸ್‌ ಪಡೆದು ಆರು ತಿಂಗಳು ಕಳೆದವರು ಇದೀಗ ಮೂರನೇ ಡೋಸ್‌ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಪ್ರಸಕ್ತ ಅಭಿಯಾನ ತುಂಬ ಮಹತ್ವ ಪಡೆದಿದೆ.

ದೇಶದಲ್ಲಿ ಕೊವಿಡ್‌ 19 ಲಸಿಕೆ ಮೂರನೇ ಡೋಸ್‌ ನೀಡಿಕೆ ಅಭಿಯಾನ ಏಪ್ರಿಲ್‌ 10ರಿಂದ ಪ್ರಾರಂಭಗೊಂಡಿದೆ. ಮೂರನೇ ಡೋಸ್‌ನ್ನು 60ವರ್ಷದ ಮೇಲ್ಪಟ್ಟವರಿಗೆ, ಆರೋಗ್ಯ ಕಾರ್ಯಕರ್ತರಿಗೆ, ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಉಳಿದಂತೆ 18-59ವರ್ಷ ವಯಸ್ಸಿನವರು ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಿ, ಹಣ ಕೊಟ್ಟು ಲಸಿಕೆ ಪಡೆಯಬೇಕು ಎಂದು ಕೇಂದ್ರ ಹೇಳಿತ್ತು. ಆದರೆ 18-59 ವರ್ಷದವರು ಅಂದಾಜು 77ಕೋಟಿ ಜನರಿದ್ದು ಅದರಲ್ಲಿ ಶೇ.1 ರಷ್ಟು ಜನರು ಮಾತ್ರ ಇದುವರೆಗೆ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಈಗ ಈ ಅಭಿಯಾನದಿಂದ ಹೆಚ್ಚಿನ ಜನರು ಲಸಿಕೆ ಪಡೆಯಬಹುದಾಗಿದೆ.

ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು; ಈ ಐದು ರಾಜ್ಯಗಳದ್ದೇ ಸಿಂಹಪಾಲು

Exit mobile version