Site icon Vistara News

ಛತ್ತೀಸ್​ಗಢ್​​​ನಲ್ಲಿ ಶಾಲೆ, ಹಾಸ್ಟೆಲ್​​ಗೆ ಸಗಣಿ ಬಣ್ಣ​; ಎಲ್ಲ ಸರ್ಕಾರಿ ಕಚೇರಿಗಳಿಗೂ ಇದೇ ಬಣ್ಣ ಬಳಿಯಲು ಸಿಎಂ ಆದೇಶ

Cow Dung

ರಾಯ್ಪುರ: ಛತ್ತೀಸ್​ಗಢದಲ್ಲಿ ಹಸುವಿನ ಸಗಣಿಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗುತ್ತದೆ. ಅಲ್ಲಿ ಗೋಧನ್​ ನ್ಯಾಯ ಯೋಜನೆ ಜಾರಿಗೊಳಿಸಲಾಗಿದ್ದು, ಅದರಡಿ ಹಸುವಿನ ಸಗಣಿಯನ್ನು ಕೆಜಿಗೆ 2 ರೂಪಾಯಿ ಕೊಟ್ಟು ಸರ್ಕಾರವೇ ಖರೀದಿ ಮಾಡುತ್ತಿದೆ. ಇನ್ನು ಅಲ್ಲಿನ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್​ ಅವರು ಕಳೆದ ಸಾಲಿನಲ್ಲಿ ಬಜೆಟ್​ ಮಂಡನೆ ಮಾಡುವಾಗ ಹಸುವಿನ ಸಗಣಿಯಲ್ಲಿ ತಯಾರಿಸಿದ ಬ್ರೀಫ್​ಕೇಸ್​​ನಲ್ಲೇ ಬಜೆಟ್​ ದಾಖಲೆಗಳನ್ನು ತಂದು ಸುದ್ದಿ ಮಾಡಿದ್ದರು.

ಈಗ ಛತ್ತೀಸ್​ಗಢ್​​ನಲ್ಲಿ ಮತ್ತೊಮ್ಮೆ ಹಸುವಿನ ಸಗಣಿಯ ಮಹತ್ವ ಸಾರಲಾಗಿದೆ. ಕಂಕೇರ್ ಜಿಲ್ಲೆಯ ಕೊಡಗಾಂವ್​​​ನಲ್ಲಿರುವ ಮಕ್ಕಳ ಸರ್ಕಾರಿ ಶಾಲೆ ಮತ್ತು ಬುಡಕಟ್ಟು ಜನಾಂಗದ ಮಕ್ಕಳ ಹಾಸ್ಟೆಲ್​​ಗೆ ಹಸುವಿನ ಸಗಣಿಯಿಂದ ನೈಸರ್ಗಿಕವಾಗಿ ತಯಾರಿಸಲಾದ ಬಣ್ಣವನ್ನು ಬಳಿಯಲಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಸುವಿನ ಸಗಣಿಯ ಪೇಂಟಿಂಗ್​ ಮಾಡಲಾಗಿದ್ದು, ಇದೂ ಕೂಡ ಗೋಧನ್​ ನ್ಯಾಯ ಯೋಜನೆಯ ಉಪಕ್ರಮವೇ ಆಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕಂಕೇರ್​ ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲಾ, ‘ಸದ್ಯ ಕೊಡಗಾಂವ್​​ನಲ್ಲಿರುವ ಎಸ್​ಯುಎಂ ಸರ್ಕಾರಿ ಶಾಲೆ ಮತ್ತು ಕೊಟ್ಟಾರಾ ಎಂಬಲ್ಲಿರುವ ಬುಡಕಟ್ಟು ಜನಾಂಗದ ಮಕ್ಕಳ ಹಾಸ್ಟೆಲ್​​ಗೆ ಸಗಣಿಯಿಂದ ತಯಾರಿಸಲಾದ ಪೇಂಟಿಂಗ್​ ಮಾಡಲಾಗಿದೆ. ಕಂಕೇರ್‌ನ ಸರಧುನವಗಾಂವ್​​​ನ ಮಹಿಳಾ ಸ್ವಸಹಾಯ ಗುಂಪುಗಳು, ಅಲ್ಲಿನ ಗೋಶಾಲೆಯ ಹಸುಗಳ ಸಗಣಿಯನ್ನು ಬಳಸಿಕೊಂಡು ನೈಸರ್ಗಿಕವಾಗಿ ಈ ಬಣ್ಣ ತಯಾರು ಮಾಡಿದ್ದವು. ಹಾಗೇ, ಹಳ್ಳಿಗಳನ್ನು ಸ್ವಾವಲಂಬಿ ಮಾಡಬೇಕು ಎಂಬ ಸದುದ್ದೇಶದಿಂದ ಛತ್ತೀಸ್​ಗಢ ಸರ್ಕಾರ ಜಾರಿಗೊಳಿಸಿದ ಮಹಾತ್ಮ ಗಾಂಧಿ ಗ್ರಾಮೀಣ ಕೈಗಾರಿಕಾ ಪಾರ್ಕ್​ (RIPA) ಯೋಜನೆಯಡಿ, ಇದೇ ಕಂಕೇರ್​ ಜಿಲ್ಲೆಯ ಚರಮಾ ಬ್ಲಾಕ್​​ನಲ್ಲಿ ಒಂದು ಹಸುವಿನ ಸಗಣಿ ಬಣ್ಣ ತಯಾರಿಕಾ ಘಟಕ ನಿರ್ಮಾಣ ಮಾಡಲಾಗಿದೆ’ ಎಂದು ಹೇಳಿದ್ದಾರೆ.

‘ಸ್ವಸಹಾಯ ಸಂಘದ 20 ಮಹಿಳೆಯರು ಈ ಹಸುವಿನ ಸಗಣಿ ಪೇಂಟ್​ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಾರೆ. ಒಂದು ದಿನಕ್ಕೆ 500 ಲೀಟರ್​​ಗಳಷ್ಟು ಬಣ್ಣ ಸಿದ್ಧವಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಡೀ ರಾಜ್ಯದ ಎಲ್ಲ ಸರ್ಕಾರಿ ಕಚೇರಿ, ಕಟ್ಟಡಗಳಿಗೂ ಈ ಗೋಬರ್​ ಪೇಂಟ್​ ಬಳಿಯಲಾಗುತ್ತದೆ’ ಎಂದೂ ಜಿಲ್ಲಾಧಿಕಾರಿ ಪ್ರಿಯಾಂಕಾ ತಿಳಿಸಿದ್ದಾರೆ.
ಗೋಬರ್​ ಪೇಂಟ್​ ತಯಾರಿಕಾ ಘಟಕದಲ್ಲಿ ಕೆಲಸ ಮಾಡುವ ಮಹಿಳೆ ಜಾಗೇಶ್ವರಿ ಭಾಸ್ಕರ್​ (45) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ‘ಸಗಣಿಯ ಪೇಂಟ್​ ತಯಾರು ಮಾಡಲು ಪ್ರಾರಂಭಿಸಿದ ಮೇಲೆ ನನ್ನ ತಿಂಗಳ ವೇತನ 3000 ರೂಪಾಯಿಂದ 5000 ರೂಪಾಯಿಗೆ ಏರಿಕೆಯಾಗಿದೆ. ಸಗಣಿಯಿಂದಲೇ ನಾವು ಹಣ ಗಳಿಸುತ್ತಿದ್ದೇವೆ. ಸದ್ಯ ನಮ್ಮ ಪೇಂಟ್​​ನ್ನು ಲೀಟರ್​ಗೆ 125 ರೂ.ಗೆ ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಆದೇಶ
ಇನ್ನು ರಾಜ್ಯದ ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೂ ಈ ಸಗಣಿಯಿಂದ ತಯಾರಿಸಲಾದ ಬಣ್ಣವನ್ನೇ ಕಡ್ಡಾಯವಾಗಿ ಬಳಿಯಬೇಕು ಎಂದು ಛತ್ತೀಸ್​ಗಢ್​ ಸಿಎಂ ಭೂಪೇಶ್​ ಬಾಘೇಲ್​ ಈಗಾಗಲೇ ಆದೇಶ ನೀಡಿದ್ದಾರೆ. ಯಾರು ಆದೇಶ ಪಾಲಿಸುವುದಿಲ್ಲವೋ ಅವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಾಗಿ ಸಗಣಿ ಬಣ್ಣದ ಬೆಲೆ ಏರುವ ಸಾಧ್ಯತೆ ಹೆಚ್ಚಾಗಿದ್ದು, ಸ್ವಸಹಾಯ ಸಂಘದ ಮಹಿಳೆಯರು, ಹಸುಗಳ ಮಾಲೀಕರೆಲ್ಲ ಫುಲ್​ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಗೋ ಸಂಪತ್ತು | ಪ್ರಪಂಚಕ್ಕೆ ಭಾರತ ನೀಡಿದ ದಿವ್ಯ ಔಷಧ ಪಂಚಗವ್ಯ

Exit mobile version