ಆಳ್ವಾರ್: ಹಸುವೊಂದಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ವೃದ್ಧನೊಬ್ಬ ಮೃತಪಟ್ಟ ಘಟನೆ ರಾಜಸ್ಥಾನದ ಆಳ್ವಾರ್ ಜಿಲ್ಲೆಯಲ್ಲಿ ನಡೆದಿದೆ. ಅಂದಹಾಗೇ, ಆ ಹಸು ಕೂಡ ಬದುಕಿಲ್ಲ. ಅದರ ದೇಹವಂತೂ ಛಿದ್ರವಾಗಿ ಬಿದ್ದು ಹೋಗಿದೆ. ರೈಲು ನೇರವಾಗಿ ಡಿಕ್ಕಿ ಹೊಡೆದಿದ್ದು ಹಸುವಿಗೇ ಆದರೂ, ಆ ಹಸುವಿನೊಂದಿಗೆ ವೃದ್ಧರೊಬ್ಬರ ಜೀವ ಹೋಗಿದ್ದು ದುರಂತವೇ ಆಗಿದೆ.
ಬುಧವಾರ ಬೆಳಗ್ಗೆ 8.30ರ ಹೊತ್ತಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕಾಳಿ ಮೋರಿ ಗೇಟ್ನಿಂದ ಹೊರಟಿತ್ತು. ಈ ರೈಲಿಗೆ ಹಸುವೊಂದು ಅಡ್ಡಬಂದು ಮೃತಪಟ್ಟಿದೆ. ರೈಲಿನ ಡಿಕ್ಕಿ ರಭಸಕ್ಕೆ ಹಸುವಿನ ದೇಹ ಛಿದ್ರಗೊಂಡಿದ್ದಲ್ಲದೆ, ಅದರ ದೇಹದ ಒಂದು ಭಾಗ 30 ಮೀಟರ್ ದೂರಕ್ಕೆ ಹೋಗಿ ಬಿದ್ದಿದೆ. ಆದೇ ಮತ್ತೊಂದು ದುರಂತಕ್ಕೆ ಕಾರಣವಾಯ್ತು. ಹಳಿಯ ಪಕ್ಕ, ಅಲ್ಲೇ ಸ್ವಲ್ಪ ದೂರದಲ್ಲಿ ವೃದ್ಧರೊಬ್ಬರು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಹಸುವಿನ ದೇಹದ ಭಾಗ ಆ ವೃದ್ಧರಿಗೆ ಬಡಿದು ಅವರು ಕೆಳಗೆ ಬಿದ್ದಿದ್ದಾರೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಬದುಕಲಿಲ್ಲ.
ಇದನ್ನೂ ಓದಿ: Vande Bharat Express : ವಂದೇ ಭಾರತ್ ರೈಲಿನ ಸದ್ಯದ ಸರಾಸರಿ ಸ್ಪೀಡ್ 83 ಕಿ.ಮೀ, ಕಾರಣವೇನು?
ಈ ವೃದ್ಧನ ಹೆಸರು ಶಿವದಯಾಳ್ ಶರ್ಮಾ ಎಂದಾಗಿದ್ದು, ರೈಲ್ವೆ ಇಲಾಖೆಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದರು. 23ವರ್ಷಗಳ ಹಿಂದೆಯೇ ನಿವೃತ್ತರಾಗಿದ್ದರು. ಯಾರ ಸಾವು, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬ ಮಾತಿದೆ. ಇಂಥ ತೀರ ಅಸಹಜ ಎನ್ನಿಸುವ ಸಾವುಗಳನ್ನು ನೋಡಿದಾಗ ಈ ಮಾತು ಅದೆಷ್ಟು ಸತ್ಯ ಎನ್ನಿಸಿಬಿಡುತ್ತದೆ. ಈ ಹಿಂದೆಯೂ ಹಲವು ಬಾರಿ ವಂದೇ ಭಾರತ್ ರೈಲುಗಳಿಗೆ ಹಸುಗಳು ಅಡ್ಡಬಂದು ಪ್ರಾಣತೆತ್ತ ಘಟನೆಗಳು ನಡೆದಿವೆ. ಅದರಲ್ಲೂ ಮುಂಬಯಿ-ಗುಜರಾತ್ ಮಾರ್ಗದಲ್ಲಿ ಇಂಥ ಪ್ರಕರಣಗಳು ಹೆಚ್ಚು. ಮುಂಬಯಿ-ಗಾಂಧಿನಗರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಉದ್ಘಾಟನೆಯಾಗಿ ಮರುದಿನವೇ ಜಾನುವಾರುವಿಗೆ ಡಿಕ್ಕಿಯಾಗಿ, ರೈಲಿಗೇ ಸಣ್ಣಮಟ್ಟದ ಹಾನಿಯಾಗಿತ್ತು.