ಉತ್ತರ ಪ್ರದೇಶದ ಆಗ್ರಾದಲ್ಲಿ ಮಾ.30ರ ಶ್ರೀರಾಮನವಮಿ ದಿನದಂದು ನಡೆದ ಗೋಹತ್ಯೆ (Cow Slaughter) ಮತ್ತು ಅದಕ್ಕೆ ಸಂಬಂಧಪಟ್ಟಂತೆ ನಾಲ್ವರು ಮುಸ್ಲಿಂ ಯುವಕರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಪ್ರಕರಣದಲ್ಲಿ ಈಗೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಗೋಹತ್ಯೆ ಮಾಡಿದ್ದು ಮುಸ್ಲಿಂ ಯುವಕರು ಅಲ್ಲ, ಕೋಮುಗಲಭೆ ಸೃಷ್ಟಿಸುವ ಜತೆಗೆ ಅದರಲ್ಲಿ ಮುಸ್ಲಿಂ ಗುಂಪನ್ನು ಸಿಲುಕಿಸುವ ಸಲುವಾಗಿ ಅಖಿಲ ಭಾರತ್ ಹಿಂದು ಮಹಾಸಭಾ ಸಂಘಟನೆಯ ಸದಸ್ಯರೇ ಗೋವನ್ನು ಹತ್ಯೆ ಮಾಡಿದ್ದಾರೆ ಎಂದು ಆಗ್ರಾ ಪೊಲೀಸರು ತಿಳಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಅಖಿಲ ಭಾರತ್ ಹಿಂದು ಮಹಾಸಭಾದ ವಕ್ತಾರ ಸಂಜಯ್ ಜಾಟ್, ಪದಾಧಿಕಾರಿ ಜಿತೇಂದ್ರ ಕುಶ್ವಾಹಾ ಸೇರಿ ನಾಲ್ವರು ಸದಸ್ಯರು, ಶನು ಮತ್ತು ಇಮ್ರಾನ್ ಖುರೇಷಿ ಎಂಬಿಬ್ಬ ಮುಸ್ಲಿಂ ಯುವಕರು ಮತ್ತು ಇನ್ನಿತರ ಮೂವರು ಕೂಡಿಕೊಂಡು ಮುಸ್ಲಿಂ ಗುಂಪಿನ ನಾಲ್ವರು ಅಮಾಯಕರ ವಿರುದ್ಧ ಪಿತೂರಿ ಮಾಡಿದ್ದರು. ಇವರೇ ಗೋಹತ್ಯೆ ಮಾಡಿ ಆ ನಾಲ್ಕು ಜನರ ತಲೆಗೆ ಆರೋಪ ಕಟ್ಟಿದ್ದರು. ಸದ್ಯ ಶನು ಮತ್ತು ಇಮ್ರಾನ್ನನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಇವರಿಬ್ಬರಿಗೂ ಕ್ರಿಮಿನಲ್ ಇತಿಹಾಸವಿದೆ ಎಂದೂ ಪೊಲೀಸರು ಹೇಳಿದ್ದಾರೆ.
ಮಾರ್ಚ್ 30ರಂದು, ಶ್ರೀರಾಮನವಮಿ ದಿನ ಅಖಿಲ ಭಾರತ್ ಹಿಂದು ಮಹಾಸಭಾದ ಪದಾಧಿಕಾರಿ ಜಿತೇಂದ್ರ ಆಗ್ರಾದ ಇತಿಮದ್-ಉದ್-ದೌಲಾ ಪೊಲೀಸ್ ಠಾಣೆಗೆ ತೆರಳಿ ನಾಲ್ವರು ಮುಸ್ಲಿಂ ಯುವಕರ ಹೆಸರನ್ನು ಉಲ್ಲೇಖಿಸಿ, ಇವರು ಗೋಹತ್ಯೆ ಮಾಡಿದ್ದಾಗಿ ದೂರು ನೀಡುತ್ತಾನೆ. ಹಸುವನ್ನು ಕೊಂದ ಸ್ಥಳವನನ್ನೂ ಹೇಳುತ್ತಾನೆ. ಅಷ್ಟೇ ಅಲ್ಲ, ಅಲ್ಲಿ ಗೋಹತ್ಯೆ ನಡೆಯುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ, ನಮ್ಮ ಸಂಘಟನೆಯ ಇನ್ನಿತರ ಸದಸ್ಯರೊಂದಿಗೆ ಹೋದೆ, ಆದರೆ ಅಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು’ ಎಂದೂ ಪೊಲೀಸರ ಎದುರು ಹೇಳುತ್ತಾನೆ. ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಾರೆ. ಜಿತೇಂದ್ರ ಕುಶ್ವಾಹಾ ಹೇಳಿದ ಸ್ಥಳದಲ್ಲಿದ್ದ ಸಿಸಿಟಿವಿ ಫೂಟೇಜ್ನ್ನು ಪರಿಶೀಲನೆ ಮಾಡುತ್ತಾರೆ. ಆದರೆ ಅಲ್ಲಿ ಗೋಹತ್ಯೆ ನಡೆದಿತ್ತಾದರೂ ಇವರು ದೂರಿನಲ್ಲಿ ಉಲ್ಲೇಖಿಸಿದ ಮುಸ್ಲಿಂ ಯುವಕರು ಫೂಟೇಜ್ನಲ್ಲಿ ಕಾಣಿಸಿರಲಿಲ್ಲ. ತನಿಖೆ ಬಳಿಕ, ಅದು ಹಿಂದು ಮಹಾಸಭಾ ಸದಸ್ಯರ ಕೃತ್ಯ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: Blackmail case | ಬ್ಲ್ಯಾಕ್‌ಮೇಲ್ ಆರೋಪದಡಿ ಹಿಂದು ಮಹಾಸಭಾ ಮುಖಂಡನ ಬಂಧನ
‘ಸಂಜಯ್ ಜಾಟ್ ಮತ್ತು ಇತರರು ಮಾರ್ಚ್ 29ರಂದು ಮೆಹ್ತಾಬ್ ಭಾಗ್ ಏರಿಯಾದಲ್ಲಿ, ಇಬ್ಬರು ಮುಸ್ಲಿಂ ಹುಡುಗರ ಸಹಾಯದಿಂದ ಗೋಹತ್ಯೆ ಮಾಡಿದ್ದರು. ಅದನ್ನು ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನಕೀಮ್, ಮೊಹಮ್ಮದ್ ಶನು ಮತ್ತು ಇನ್ನೊಬ್ಬ ಯುವಕನ ತಲೆಗೆ ಕಟ್ಟಲು ಪ್ರಯತ್ನಿಸಿದ್ದರು. ಇದು ಶ್ರೀರಾಮನವಮಿ ದಿನ ಕೋಮುಗಲಭೆ ಸೃಷ್ಟಿಸಲು ಮಾಡಿದ್ದ ಪ್ಲ್ಯಾನ್ ಆಗಿತ್ತು. ಹಿಂದು ಮಹಾಸಭಾ ಸದಸ್ಯರೊಂದಿಗೆ ಸೇರಿ, ಪಿತೂರಿ ಮಾಡಿದ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿದಾಗಲೇ ಸಂಪೂರ್ಣ ಸತ್ಯ ಹೊರಬಂದಿದೆ ಎಂದು ಆಗ್ರಾ ಡಿಸಿಪಿ ಸೂರಜ್ ರಾಜ್ ತಿಳಿಸಿದ್ದಾರೆ.
ಇನ್ನೊಂದೆಡೆ ಈ ವಿಷಯ ಹೊರಬರುತ್ತಿದ್ದಂತೆ ಹಿಂದು ಮಹಾಸಭಾ ಕಾರ್ಯಕರ್ತರು ಜಿತೇಂದ್ರ ಕುಶ್ವಾಹಾ ಮತ್ತು ಸಂಜಯ್ ಜಾಟ್ ವಿರುದ್ಧ ದೂರು ನೀಡಿದ್ದಾರೆ. ಆದರೆ ಸಂಜಯ್ ಜಾಟ್ ಈ ಆರೋಪವನ್ನು ತಳ್ಳಿ ಹಾಕಿದ್ದಾನೆ. ಅಖಿಲ ಭಾರತ ಹಿಂದು ಮಹಾಸಭಾದ ವಿರುದ್ಧ ನಡೆಯುತ್ತಿರುವ ಪಿತೂರಿ ಇದು. ನಮ್ಮದೇನೂ ತಪ್ಪಿಲ್ಲ ಎಂದಿದ್ದಾರೆ.