ನವ ದೆಹಲಿ: ಸ್ವತಂತ್ರ ಭಾರತದ ಮೊದಲ ಮತ್ತು ಮೊದಲ ಭಾರತೀಯ ಗವರ್ನರ್ ಜನರಲ್ ಆಗಿದ್ದ ಸಿ.ರಾಜಗೋಪಾಲಾಚಾರಿ ಅವರ ಮರಿ ಮೊಮ್ಮಗ ಸಿ.ಆರ್.ಕೇಶವನ್ (CR Kesavan) ಅವರು ಇಂದು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಪಕ್ಷ ಸಾಗುತ್ತಿರುವ ಹಾದಿ ಬಗ್ಗೆ ನನಗೆ ಭಿನ್ನ ಅಭಿಪ್ರಾಯವಿದೆ. ಕಾಂಗ್ರೆಸ್ನ ಯಾವ ಮೌಲ್ಯ-ಸಿದ್ಧಾಂತಗಳನ್ನು ನೋಡಿ, ನಾನು ಈ ಪಕ್ಷಕ್ಕೆ ಸೇರ್ಪಡೆಗೊಂಡು, ಎರಡು ದಶಕಗಳ ಕಾಲ ಕಾಂಗ್ರೆಸ್ಗಾಗಿ ದುಡಿದೆನೋ ಆ ಮೌಲ್ಯಗಳ ಕುರುಹು ಕೂಡ ಕಾಂಗ್ರೆಸ್ನಲ್ಲಿ ಉಳಿದಿಲ್ಲ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಕೇಶವನ್ (CR Kesavan resigned from the Congress)ಉಲ್ಲೇಖಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ರಾಜೀನಾಮೆ ಪತ್ರ ಕಳಿಸಿರುವ ಸಿ.ಆರ್.ಕೇಶವನ್, ‘ಕಾಂಗ್ರೆಸ್ನ ಈಗಿನ ನಿಲುವು, ಸಿದ್ಧಾಂತವನ್ನು ನಾನು ಒಪ್ಪುತ್ತೇನೆ ಎಂದು ಮನಸ್ಫೂರ್ತಿಯಾಗಿ ಹೇಳಲು ಸಾಧ್ಯವೂ ಇಲ್ಲ. ಇದೇ ಕಾರಣಕ್ಕೆ ನಾನು ಪಕ್ಷದ ರಾಷ್ಟ್ರೀಯ ಮಟ್ಟದ ಜವಾಬ್ದಾರಿಯಿಂದ ದೂರ ಉಳಿದಿದ್ದೇನೆ. ಭಾರತ್ ಜೋಡೋ ಯಾತ್ರೆಯಲ್ಲೂ ಭಾಗವಹಿಸಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾಂಸ ತಿಂದು ದೇವಾಲಯಕ್ಕೆ ಹೋಗುವುದು ಅಪರಾಧ ಅನ್ನೋ ಬಿಜೆಪಿ ಸಿ.ಟಿ.ರವಿ ಬಗ್ಗೆ ತುಟಿ ಬಿಚ್ಚುವುದಿಲ್ಲ: ಕಾಂಗ್ರೆಸ್ ಟೀಕೆ
ರಾಜೀನಾಮೆ ಬಳಿಕ ಎಎನ್ಐ ಜತೆ ಮಾತನಾಡಿದ ಸಿ.ಆರ್.ಕೇಶವನ್ ಅವರು ‘ನಾನು 22ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದೇನೆ. ಸದ್ಯದ ಕಾಂಗ್ರೆಸ್ನ ಮನಸ್ಥಿತಿ ವಾಸ್ತವಿಕವಾಗಿಯೂ ಇಲ್ಲ, ರಚನಾತ್ಮಕವಾಗಿಯೂ ಇಲ್ಲ. ಪಕ್ಷದ ಮೌಲ್ಯಗಳು ಬದಲಾಗಿವೆ ಎಂದಿದ್ದಾರೆ. ಇನ್ನು ಕೇಶವನ್ ಅವರು 2001ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಅವರಿಗೆ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸುವ ಅವಕಾಶ ಸಿಕ್ಕಿತ್ತು. ಶ್ರೀ ಪೆರಂಬದೂರಿನಲ್ಲಿ ರಾಜೀವ್ ಗಾಂಧಿ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಯುತ್ ಡೆವಲಪ್ನ ಉಪಾಧ್ಯಕ್ಷರಾಗಿ, ಪ್ರಸಾರ ಭಾರತಿ ಮಂಡಳಿ ಸದಸ್ಯರಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಪಕ್ಷಕ್ಕೆ ರಾಜೀನಾಮೆ ಕೊಡುವ ಹೊತ್ತಿನಲ್ಲಿ ಅವರು ತನಗೆ ಅವಕಾಶ ಕೊಟ್ಟ ಸೋನಿಯಾ ಗಾಂಧಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ನ ಹಲವು ಹಿರಿ-ಕಿರಿಯ ನಾಯಕರು ಪಕ್ಷ ತೊರೆದು ಹೋಗಿದ್ದಾರೆ. ಕಾಂಗ್ರೆಸ್ ಮೊದಲಿನಂತೆ ಇಲ್ಲ ಎಂದೇ ಎಲ್ಲರೂ ಆರೋಪಿಸಿದ್ದಾರೆ. ಇತ್ತೀಚೆಗೆ ಮಾಜಿ ರಕ್ಷಣಾ ಸಚಿವ ಎ.ಕೆ.ಅಂಟೋನಿ ಅವರ ಪುತ್ರ ಅನಿಲ್ ಅಂಟೋನಿ ಕಾಂಗ್ರೆಸ್ ತೊರೆದಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಿಬಿಸಿ ನಿರ್ಮಿಸಿದ ಡಾಕ್ಯುಮೆಂಟರಿಯನ್ನು ಕಾಂಗ್ರೆಸ್ ಸಹಮತಿಸುತ್ತಿದೆ. ಆದರೆ ನಾನು ಅದನ್ನು ಒಪ್ಪುವುದಿಲ್ಲ ಎಂದು ಹೇಳಿ ರಾಜೀನಾಮೆ ಕೊಟ್ಟಿದ್ದರು. ಆದರೆ ಕೇಶವನ್ ಅವರು ಇಂಥ ಕಾರಣ ಕೊಟ್ಟಿಲ್ಲ. ಕಾಂಗ್ರೆಸ್ನ ಬದಲಾದ ಮೌಲ್ಯಗಳನ್ನು ಒಪ್ಪಲಾಗುತ್ತಿಲ್ಲ ಎಂದಿದ್ದಾರೆ.