ನವ ದೆಹಲಿ: ದೇಶದಲ್ಲಿ ಜಾತಿಪದ್ಧತಿಯನ್ನು ಹುಟ್ಟು ಹಾಕಿದ್ದು ದೇವರಲ್ಲ, ಪುರೋಹಿತರು/ಪಂಡಿತರು ಎಂದು ಹೇಳಿದ್ದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ವಿರುದ್ಧ ಬಿಹಾರದ ಮುಜಾಫರ್ಪುರ ಜಿಲ್ಲೆಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ನಲ್ಲಿ ಕ್ರಿಮಿನಲ್ ದೂರು ದಾಖಲಾಗಿದೆ. ಅಡ್ವೋಕೇಟ್ ಸುಧೀರ್ ಓಝಾ ಎಂಬುವರು ಮೋಹನ್ ಭಾಗವತ್ ವಿರುದ್ಧ ದೂರು ನೀಡಿದ್ದಾರೆ.
‘ಫೆ.5ರಂದು ಮುಂಬಯಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಬ್ರಾಹ್ಮಣರು ಈ ದೇಶದಲ್ಲಿ ಜಾತಿ ವ್ಯವಸ್ಥೆ ಸೃಷ್ಟಿಸಿದರು ಎಂದು ಹೇಳಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ನಾನು ಇಂದು ದೂರು ದಾಖಲಿಸಿದ್ದೇನೆ. ಮೋಹನ್ ಭಾಗವತ್ ತಮ್ಮ ಹೇಳಿಕೆಯ ಮೂಲಕ ಶಾಂತಿ ಭಂಗ ಪ್ರಚೋದನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್ 504, 505 ಮತ್ತು 506ರ ಅಡಿಯಲ್ಲಿ ದೂರು ದಾಖಲಿಸಿದ್ದೇನೆ. ಮೋಹನ್ ಭಾಗವತ್ ಅವರು ಸಮಾಜದಲ್ಲಿ ಒಡಕು ಮೂಡಿಸುವ ಉದ್ದೇಶದಿಂದಲೇ ಈ ಹೇಳಿಕೆಯನ್ನು ನೀಡಿದ್ದಾರೆ. ಇದು ಖಂಡಿತವಾಗಿಯೂ ಮುಂದಿನ ಚುನಾವಣೆಯಲ್ಲಿ ಮತಗಳನ್ನು ಗಮನದಲ್ಲಿಟ್ಟುಕೊಂಡೇ ಆಡಿದ ಮಾತುಗಳು. ಆದರೆ ಅವರ ಹೇಳಿಕೆಗಳು ಬ್ರಾಹ್ಮಣರನ್ನು ಅಪಮಾನಿಸುವಂತೆ ಇದೆ’ ಎಂದು ಅಡ್ವೋಕೇಟ್ ಸುಧೀರ್ ಓಝಾ ಹೇಳಿದ್ದಾರೆ.
ಇದನ್ನೂ ಓದಿ: ಮಾಂಸಾಹಾರ ಸೇವನೆ ಮಾಡುವವರಿಗೆ ಸಲಹೆಯೊಂದನ್ನು ಕೊಟ್ಟ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಫೆ.5ರಂದು ಮುಂಬಯಿಯಲ್ಲಿ ಆಯೋಜಿಸಲಾಗಿದ್ದ ಸಂತ ರೋಹಿದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, ‘ಜಾತಿ ಪದ್ಧತಿಯನ್ನು ದೇವರು ಹುಟ್ಟುಹಾಕಿಲ್ಲ. ಈ ವ್ಯವಸ್ಥೆಯನ್ನು ಸೃಷ್ಟಿಸಿದವರು ಪಂಡಿತರು’ ಎಂದು ಹೇಳಿದ್ದರು. ಈ ಮಾತುಗಳು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ನಾನು ‘ಪಂಡಿತ ಎಂದು ಹೇಳಿದ್ದು ಪುರೋಹಿತ ಎಂಬರ್ಥದಲ್ಲಿ ಅಲ್ಲ, ಬುದ್ಧಿಜೀವಿಗಳು (ವಿದ್ವಾಂಸರು) ಎಂಬ ಅರ್ಥದಲ್ಲಿ’ ಎಂದು ಸಮರ್ಥಿಸಿಕೊಂಡಿದ್ದರು.