Site icon Vistara News

UP Encounter: ಉತ್ತರ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಎನ್​ಕೌಂಟರ್​; ಪೊಲೀಸ್ ಗುಂಡಿಗೆ ಕ್ರಿಮಿನಲ್ ಗುಫ್ರಾನ್​ ಬಲಿ

Criminal Gufran

#image_title

ಉತ್ತರ ಪ್ರದೇಶದಲ್ಲಿ ಕ್ರಿಮಿನಲ್​ಗಳನ್ನು ಅಲ್ಲಿನ ಪೊಲೀಸರು ಮುಲಾಜಿಲ್ಲದೆ ಎನ್​ಕೌಂಟರ್ (UP Encounter) ಮಾಡಿ ಕೊಂದು ಹಾಕುತ್ತಿದ್ದಾರೆ. ಇದೀಗ ಉತ್ತರ ಪ್ರದೇಶದ ವಿಶೇಷ ಟಾಸ್ಕ್​ ಫೋರ್ಸ್​ (STF) ಮತ್ತೊಬ್ಬ ಕ್ರಿಮಿನಲ್​​ನನ್ನು ಎನ್​ಕೌಂಟರ್​ನಲ್ಲಿ ಹತ್ಯೆ (Uttar Pradesh Encounter) ಮಾಡಿದೆ. ಆತನ ಹೆಸರು ಗುಫ್ರಾನ್ ಎಂದಾಗಿದ್ದು, 13ಕ್ಕೂ ಹೆಚ್ಚು ಕೊಲೆ, ಡಕಾಯಿತಿ, ಕಳ್ಳತನದ ಕೇಸ್​ಗಳಲ್ಲಿ ಇವನು ಪೊಲೀಸರಿಗೆ ಬೇಕಾದವನಾಗಿದ್ದ. ಪ್ರತಾಪ್​ಗಢ್​ ಮತ್ತು ಸುಲ್ತಾನಪುರ ಠಾಣೆಗಳಲ್ಲಿ ಗುಫ್ರಾನ್ ವಿರುದ್ಧ ಕೇಸ್​ಗಳು ದಾಖಲಾಗಿದ್ದವು. ಇವನ ತಲೆಗೆ 1,25,000 ರೂ.ಬಹುಮಾನ ಕೂಡ ಇತ್ತು. ಮಂಗಳವಾರ ಮುಂಜಾನೆ ಸುಮಾರು 5ಗಂಟೆ ಹೊತ್ತಿಗೆ ಕೌಶಂಬಿ ಎಂಬಲ್ಲಿ ಪೊಲೀಸರು ಈತನ ಉಸಿರು ನಿಲ್ಲಿಸಿದ್ದಾರೆ. ಗುಫ್ರಾನ್​ಗೆ ಮೊದಲು ಗುಂಡು ಹೊಡೆದ ಪೊಲೀಸರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲೇ ಅವನ ಜೀವ ಹೋಗಿತ್ತು.

ವಿವಿಧ ಕೊಲೆ, ದರೋಡೆ ಕೇಸ್​ನಡಿ ಕಳೆದ ಆರು ವರ್ಷಗಳಿಂದಲೂ ಗುಫ್ರಾನ್​ನನ್ನು ಪೊಲೀಸರು ಹುಡುಕುತ್ತಿದ್ದರು. ಮೂಲತಃ ಪ್ರತಾಪ್​ಗಢ್ ನಿವಾಸಿಯಾಗಿದ್ದ ಗುಫ್ರಾನ್​ ಪೊಲೀಸ್ ಕಣ್ಣಿಗೆ ಬೀಳದಂತೆ ಓಡಾಡಿಕೊಂಡಿದ್ದ. ಇತ್ತೀಚೆಗೆ ಅಂದರೆ ಏಪ್ರಿಲ್​ನಲ್ಲಿ ಒಂದು ಜ್ಯುವೆಲರಿ ಶಾಪ್​ ಲೂಟಿ ಮಾಡಿದ್ದ. ಇಂದು ಮುಂಜಾನೆ ಗುಫ್ರಾನ್​ನನ್ನು ಕೌಶಂಬಿಯ ಸಮದಾ ಎಂಬಲ್ಲಿ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಆದರೆ ಗುಫ್ರಾನ್ ಪೊಲೀಸರಿಗೇ ಗುಂಡುಹಾರಿಸಿದ್ದಾನೆ. ಅದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದಾಗ ತೀವ್ರವಾಗಿ ಗಾಯಗೊಂಡು ಬಿದ್ದಿದ್ದ. ಅವನಿಂದ 9ಎಂಎಂ ಕಾರ್ಬೈನ್, ಪಿಸ್ತೂಲ್​ ಮತ್ತು ಅಪಾಚೆ ಬೈಕ್​​ನ್ನು ವಶಪಡಿಸಿಕೊಳ್ಳಲಾಗಿದೆ. ಎನ್​ಕೌಂಟರ್​ ಬಗ್ಗೆ ಉತ್ತರ ಪ್ರದೇಶ ವಿಶೇಷ ಟಾಸ್ಕ್ ಫೋರ್ಸ್​ ಡಿವೈ ಎಸ್​ಪಿ ಧರ್ಮೇಶ್ ಕುಮಾರ್ ಶಹಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೊಂದು ಎನ್​ಕೌಂಟರ್​; ಪೊಲೀಸ್ ಗುಂಡಿಗೆ ಬಲಿಯಾದ ಗ್ಯಾಂಗ್​ಸ್ಟರ್​ ಅನಿಲ್ ದುಜಾನಾ

ಉತ್ತರಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಒಬ್ಬಲ್ಲ ಒಬ್ಬ ಕ್ರಿಮಿನಲ್​ನನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗುತ್ತಿದೆ. ​ಗ್ಯಾಂಗ್​ಸ್ಟರ್​ ಮತ್ತು ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್​ ಪುತ್ರ ಅಸಾದ್​ನನ್ನು ಏಪ್ರಿಲ್​ನಲ್ಲಿ ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿತ್ತು. ಅದಾದ ಬಳಿಕ ಅತೀಕ್​ ಅಹ್ಮದ್ ಮತ್ತು ಅವನ ತಮ್ಮ ಅಶ್ರಾಫ್​​, ಪೊಲೀಸರ ಎದುರಲ್ಲೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಈ ಹತ್ಯೆಯನ್ನು ಪೊಲೀಸರೇ ಮಾಡಿಸಿದ್ದಾರೆ ಎಂಬ ಆರೋಪ ಕೂಡ ಚಾಲ್ತಿಯಲ್ಲಿದೆ. ಮೇ ತಿಂಗಳಲ್ಲಿ ಗ್ಯಾಂಗ್​ಸ್ಟರ್​ ಅನಿಲ್​ ದುಜಾನಾ ಎಂಬಾತನನ್ನು ಪೊಲೀಸರು ಕೊಂದಿದ್ದು. ಈತನ ವಿರುದ್ಧ 62 ಕ್ರಿಮಿನಲ್ ಕೇಸ್​ಗಳು ಇದ್ದವು.

Exit mobile version