Site icon Vistara News

ಸಿಆರ್​ಪಿಎಫ್​ ಶ್ರೀನಗರ ವಲಯದ ಮೊದಲ ಮಹಿಳಾ ಐಜಿ ಚಾರು ಸಿನ್ಹಾ ವರ್ಗಾವಣೆ; ಸೂಕ್ಷ್ಮ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿದ ದಿಟ್ಟ ಅಧಿಕಾರಿ

CRPF IG Charu Sinha transfer to the paramilitary Forces southern sector in Hyderabad

#image_title

ಶ್ರೀನಗರ: ಕೇಂದ್ರೀಯ ಮೀಸಲು ಪಡೆ (CRPF)ಯ ಶ್ರೀನಗರ ವಲಯದ ಮೊದಲ ಮಹಿಳಾ ಇನ್ಸ್​ಪೆಕ್ಟರ್​ ಜನರಲ್​ (ಐಜಿ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅಧಿಕಾರಿ ಚಾರು ಸಿನ್ಹಾ ಇದೀಗ ಅಲ್ಲಿಂದ ಹೈದರಾಬಾದ್​ನ ಅರೆಸೇನಾಪಡೆಯ ದಕ್ಷಿಣ ವಲಯಕ್ಕೆ ವರ್ಗಾವಣೆಗೊಂಡಿದ್ದಾರೆ. 2020ರಲ್ಲಿ ಅವರು ಶ್ರೀನಗರ ವಲಯ ಐಜಿಯಾಗಿ ನಿಯೋಜನೆಗೊಂಡು, ಎರಡೂವರೆ ವರ್ಷಗಳ ಕಾಲ ಬದ್ಗಾಮ್​, ಶ್ರೀನಗರ ಮತ್ತು ಗಂದರ್​ಬಾಲ್​ ಜಿಲ್ಲೆಗಳಲ್ಲಿ, 22 ಸಾವಿರ ಸಿಆರ್​ಪಿಎಫ್​ ಸಿಬ್ಬಂದಿಯನ್ನೊಳಗೊಂಡ 22 ಬೆಟಾಲಿಯನ್​ಗಳಿಗೆ ಕಮಾಂಡರ್ ಆಗಿದ್ದರು. ಅತ್ಯಂತ ಸೂಕ್ಷ್ಮ ವಲಯವಾದ ಶ್ರೀನಗರದಲ್ಲಿ ಪೂರ್ಣಾವಧಿ ಕರ್ತವ್ಯ ನಿರ್ವಹಿಸಿ, ಇದೀಗ ವರ್ಗಾವಣೆಗೊಂಡಿದ್ದಾರೆ.

ಚಾರು ಸಿನ್ಹಾ ಅವರು, ತೆಲಂಗಾಣ ಕೇಡರ್​ನ 1996ನೇ ಬ್ಯಾಚ್​​ನ ಐಪಿಎಸ್ ಅಧಿಕಾರಿ. ಉಗ್ರರ ಹಾವಳಿ ಜಾಸ್ತಿಯಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಶ್ರೀನಗರಕ್ಕೆ ನಿಯೋಜನೆಗೊಳ್ಳುವುದಕ್ಕೂ ಮೊದಲು ಅವರು ಬಿಹಾರದ ನಕ್ಸಲ್​ ಪೀಡಿತ ವಲಯಗಳಲ್ಲಿ ಸಿಆರ್​ಪಿಎಫ್​ ಐಜಿಯಾಗಿ ಕಾರ್ಯನಿರ್ವಹಿಸಿದ್ದರು. ವೃತ್ತಿ ಬದುಕಲ್ಲಿ ಸಖತ್​ ರಿಸ್ಕಿ ಏರಿಯಾಗಳಲ್ಲೇ ಕಾರ್ಯನಿರ್ವಹಿಸಿದ ಖ್ಯಾತಿ ಅವರದ್ದು.

ಶ್ರೀನಗರದಲ್ಲಿ ಕಾರ್ಯನಿರ್ವಹಿಸುವ ವೇಳೆ ಅವರು ಅತ್ಯಂತ ಸೂಕ್ಷ್ಮವಾಗಿ ಹೆಜ್ಜೆಗಳನ್ನು ಇಟ್ಟಿದ್ದಾರೆ. ಸ್ಥಳೀಯರ ಸುರಕ್ಷತೆ ಬಗ್ಗೆ ಸಂವೇದನಾಶೀಲವಾಗಿ ವರ್ತಿಸಿದ್ದಾರೆ. ನಾಗರಿಕ ಸ್ನೇಹಿ ಐಜಿಯಾಗಿದ್ದರು. ಶ್ರೀನಗರದಲ್ಲಿ ಭದ್ರತಾ ವ್ಯವಸ್ಥೆ ಕದಡದೆ ಇರಲು ಹಲವು ಪ್ರಮುಖ ಕ್ರಮ ಕೈಗೊಂಡಿದ್ದಾರೆ. ಸಿಆರ್​ಪಿಎಫ್​ ಸಿಬ್ಬಂದಿ ಮತ್ತು ಸ್ಥಳೀಯ ಜನರ ಮಧ್ಯೆ ಸ್ನೇಹ-ಸೌಹಾರ್ದತೆ ಬೆಳೆಯುವಲ್ಲಿ ಚಾರು ಸಿನ್ಹಾ ಪಾತ್ರ ದೊಡ್ಡದು ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ | ನನ್ನನ್ನು ಮಹಿಳಾ ಅಧಿಕಾರಿ ಎನ್ನಬೇಡಿ, ನಾನೊಬ್ಬ ಐಪಿಎಸ್‌ ಆಫೀಸರ್‌ ಅಷ್ಟೆ ಎಂದಿದ್ದರು ಚಾರು ಮೇಡಂ

2022ರ ಜನವರಿಯಲ್ಲಿ ಲಷ್ಕರೆ ತೊಯ್ಬಾದ ಕಮಾಂಡರ್ ಸಲೀಂ ಪೆರ್ರಿ ಮತ್ತು ಇನ್ನೊಬ್ಬ ವಿದೇಶಿ ಉಗ್ರನನ್ನು ಸಿಆರ್​ಪಿಎಫ್​ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೊಂದಿದ್ದರು. ಆ ಕಾರ್ಯಾಚರಣೆ ನೇತೃತ್ವವನ್ನು ಇದೇ ಚಾರು ಸಿನ್ಹಾ ವಹಿಸಿಕೊಂಡಿದ್ದರು. ಉಗ್ರರ ವಿರುದ್ಧ ಕಾರ್ಯಾಚರಣೆಯ ನೇತೃತ್ವ ವಹಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ. ಅದರ ಹೊರತಾಗಿ ಕೊವಿಡ್​ 19 ಸಾಂಕ್ರಾಮಿಕ ಸಂದರ್ಭ, ಅಮರನಾಥ ಯಾತ್ರೆ ಸಂದರ್ಭಗಳಲ್ಲೆಲ್ಲ ಚಾರು ಸಿನ್ಹಾ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೇ, ಕಾಶ್ಮೀರದಲ್ಲಿ ತಾವು ಸಲ್ಲಿಸಿದ ಸೇವೆ ತುಂಬ ತೃಪ್ತಿದಾಯಕವಾಗಿದೆ ಎಂದು ಚಾರು ಸಿನ್ಹಾ ಹೇಳಿಕೊಂಡಿದ್ದಾರೆ.

Exit mobile version