ನವ ದೆಹಲಿ: ಕೇಂದ್ರೀಯ ಮೀಸಲು ಪಡೆ (CRPF) ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ವೊಬ್ಬರು ದೆಹಲಿಯ ತುಘಲಕ್ ರಸ್ತೆಯಲ್ಲಿರುವ ಗುಪ್ತಚರ ದಳದ ನಿರ್ದೇಶಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಪ್ತಚರದಳದ ನಿರ್ದೇಶಕನ ಮನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಶುಕ್ರವಾರ, ತಮ್ಮ ಸರ್ವೀಸ್ ರಿವಾಲ್ವರ್ ಎಕೆ 47ನಿಂದ ತಮಗೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ.
ಮೃತ ಸಿಆರ್ಪಿಎಫ್ ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ರನ್ನು ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಮಧ್ಯಪ್ರದೇಶದವರು. ಶುಕ್ರವಾರ ಸಂಜೆ 4.25ರ ಹೊತ್ತಿಗೆ ರಾಜೇಶ್ ಕುಮಾರ್ ಶೂಟ್ ಮಾಡಿಕೊಂಡಿದ್ದಾಗಿ ಕರೆ ಬಂತು. ಕೂಡಲೇ ಸ್ಥಳಕ್ಕೆ ಹೋಗಿ, ಅವರನ್ನು ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಚಿಕಿತ್ಸೆ ಫಲಿಸಲಿಲ್ಲ ಎಂದು ದೆಹಲಿ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೇ, ಘಟನೆ ನಡೆಯುವಾಗ ಸ್ಥಳದಲ್ಲೇ ಇದ್ದವರ ಹೇಳಿಕೆಗಳನ್ನೂ ಪಡೆದಿದ್ದಾರೆ. ರಾಜೇಶ್ ಕುಮಾರ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ: Murder Case: ಕ್ಷುಲ್ಲಕ ಕಾರಣಕ್ಕೆ ನಡೆದ ಅಣ್ಣ ತಮ್ಮನ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ
ರಾಜೇಶ್ ಕುಮಾರ್ ಅವರು ಗುಪ್ತಚರ ದಳದ ನಿರ್ದೇಶಕ ಮನೆಯ ಮುಖ್ಯ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ ಗುಂಡು ಹಾರಿದ ಶಬ್ದ ಕೇಳಿತು. ಆ ಮನೆಯ ಸುತ್ತ ಕರ್ತವ್ಯದಲ್ಲಿದ್ದ ಎಲ್ಲರೂ ಅಲ್ಲಿಗೆ ಓಡಿ ಹೋದರು. ಹೋಗುವಷ್ಟರಲ್ಲಿ ರಾಜೇಶ್ ಕುಮಾರ್ ರಕ್ತದ ಮಡುವಲ್ಲಿ ಬಿದ್ದಿದ್ದರು. ಇನ್ನು ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಕೂಡ ಸಿಕ್ಕಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.