ಹೈದರಾಬಾದ್: ಪ್ರವಾದಿ ಮಹಮ್ಮದ್ ಅವಹೇಳನಕ್ಕೆ ಪ್ರತಿಯಾಗಿ ದೇಶದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸುವುದಾಗಿ ಅಲ್‌ಖೈದ್ ಬೆದರಿಕೆ ಒಡ್ಡಿದ ಬೆನ್ನಿಗೇ ಇದೀಗ ದೇಶದ 70 ಸರಕಾರಿ ಮತ್ತು ಖಾಸಗಿ ವೆಬ್‌ಸೈಟ್‌ಗಳ ಮೇಲೆ ಸೈಬರ್ ಅಟ್ಯಾಕ್ (cyber attack) ನಡೆದಿದೆ.
ಮಲೇಷ್ಯಾದ ಡ್ರ್ಯಾಗನ್‌ಫೋರ್ಸ್ ಎಂಬ ಹ್ಯಾಕ್ಟಿವಿಸ್ಟ್ ಗುಂಪಿನಿಂದ ಈ ಸರಣಿ ಸೈಬರ್ ದಾಳಿಗಳು ನಡೆದಿದ್ದು, ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಎಕ್ಸ್‌ಟೆನ್ಶನ್ ಮ್ಯಾನೇಜ್‌ಮೆಂಟ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್‌ನ ಇ-ಪೋರ್ಟಲ್, ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಗುರಿಯಾಗಿಸಿಕೊಂಡಿದೆ. ಒಟ್ಟಾರೆಯಾಗಿ, ಈ ಗುಂಪು ಸುಮಾರು 70 ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದೆ, ಪ್ರಮುಖ ಶಿಕ್ಷಣ ಸಂಸ್ಥೆಗಳಾದ ದೆಹಲಿ ಪಬ್ಲಿಕ್ ಸ್ಕೂಲ್, ಭವನ್ಸ್ ಮತ್ತು ದೇಶಾದ್ಯಂತದ ಇತರ ಕೆಲವು ಕಾಲೇಜುಗಳ ವೆಬ್‌ಸೈಟ್‌ಗಳ ಮೇಲೆ ಸೈಬರ್ ದಾಳಿ ನಡೆಸಿದೆ. ಮಹಾರಾಷ್ಟ್ರ ಒಂದರಲ್ಲೇ 50ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ವಿರೂಪಗೊಂಡಿರುವುದು ಕಂಡುಬಂದಿದೆ.
ಏನು ಮಾಡುತ್ತಾರೆ ದಾಳಿ ಮಾಡಿ?
ಎಲ್ಲ ಕಡೆ ಒಂದೇ ತಂಡ ಹ್ಯಾಕ್ ಮಾಡಿರುವುದು ಅದರ ಕಾರ್ಯಾಚರಣೆ ವಿಧಾನದಿಂದ ಸ್ಪಷ್ಟವಾಗಿದೆ. ಆಡಿಯೋ ಕ್ಲಿಪ್‌ಗಳು ಮತ್ತು ಪಠ್ಯಗಳ ಮೂಲಕ, ಹ್ಯಾಕರ್‌ಗಳ ಗುಂಪು ಒಂದೇ ತೆರನಾದ ಸಂದೇಶವನ್ನು ಕಳುಹಿಸಿದೆ. “ನಿಮ್ಮ ಧರ್ಮ ನಿಮಗಾಗಿ ಇರುವಂತೆ, ನನಗೆ ನನ್ನ ಧರ್ಮ” ಎಂಬ ಸಂದೇಶಗಳು ಹ್ಯಾಕ್ ಆಗಿರುವ ವೆಬ್‌ಸೈಟ್‌ಗಳಲ್ಲಿ ಹರಿದಾಡಿದೆ.
ಇದು ಎಲ್ಲಾ ಮುಸ್ಲಿಂ ಹ್ಯಾಕರ್‌ಗಳು, ಪ್ರಪಂಚದಾದ್ಯಂತದ ಎಲ್ಲಾ ಹ್ಯಾಕರ್‌ಗಳು, ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಕಾರ್ಯಕರ್ತರಿಗೆ ಭಾರತದ ವಿರುದ್ಧ ಅಭಿಯಾನವನ್ನು ಪ್ರಾರಂಭಿಸುವಂತೆ ಕರೆ ನೀಡಿದೆ. ಹೀಗಾಗಿ ಇದು ಮುಸ್ಲಿಂ ಗುಂಪಿನ ಕೃತ್ಯ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.
ಭಾನುವಾರದ ವೇಳೆಗೆ ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ವೆಬ್‌ಸೈಟ್ ಅನ್ನು ಮರುಸ್ಥಾಪಿಸುವಲ್ಲಿ ಭಾರತೀಯ ಅಧಿಕಾರಿಗಳು ಯಶಸ್ವಿಯಾಗಿದ್ದರೂ, ICAR ನ ಪುಟಗಳಲ್ಲಿ ಒಂದು ಈಗಲೂ ವಿರೂಪಗೊಂಡ ಸ್ಥಿತಿಯಲ್ಲೇ ಇದೆ. ವೇಬ್ಯಾಕ್ ಮೆಷಿನ್‌ನ ಕುರಿತ ಇಂಟರ್ನೆಟ್ ಆರ್ಕೈವ್ ವಿಶ್ಲೇಷಣೆಯ ಪ್ರಕಾರ, ಜೂನ್ 8 ಮತ್ತು 12 ರ ನಡುವೆ ಭಾರತೀಯ ಸರ್ಕಾರಿ ಸೈಟ್‌ಗಳು ಮತ್ತು ಖಾಸಗಿ ಪೋರ್ಟಲ್‌ಗಳನ್ನು ವಿರೂಪಗೊಳಿಸಲಾಗಿದೆ. ಅದೇ ಹ್ಯಾಕ್ಟಿವಿಸ್ಟ್ ಗುಂಪಿನಿಂದ ಭಾರತದಲ್ಲಿನ ಪ್ರಮುಖ ಬ್ಯಾಂಕ್ ಒಂದರ ತಂತ್ರಜ್ಞಾನವನ್ನು ಭೇದಿಸುವ ಪ್ರಯತ್ನಗಳೂ ನಡೆದಿವೆ ಎಂದು ಭದ್ರತಾ ತಜ್ಞರು ತಿಳಿಸಿದ್ದಾರೆ. ಈ ಹ್ಯಾಕ್ಟಿವಿಸ್ಟ್ ಗುಂಪಿನಲ್ಲಿ 13,000ಕ್ಕೂ ಹೆಚ್ಚು ಸದಸ್ಯರಿದ್ದಾರೆ.
ಇದನ್ನೂ ಓದಿ| ಗುಜರಾತ್, ಉತ್ತರಪ್ರದೇಶ, ಮುಂಬಯಿ, ದಿಲ್ಲಿಯಲ್ಲಿ ಆಲ್-ಖೈದಾ ಆತ್ಮಾಹುತಿ ದಾಳಿ ಬೆದರಿಕೆ