ದೆಹಲಿ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಅಸಾನಿ ಚಂಡಮಾರುತದ (Cyclone Asani) ಪ್ರಭಾವದಿಂದ ದೇಶದ ವಿವಿಧೆಡೆ ಮಳೆಯಾಗುತ್ತಿದೆ. ಕರ್ನಾಟಕದಲ್ಲೂ ಮಂಗಳವಾರ ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣ ಇದ್ದು, ಹಲವು ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೇ 9ರಿಂದ ಪ್ರಾರಂಭವಾಗಿರುವ ಅಸಾನಿ ಚಂಡಮಾರುತ ಇಂದು ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ತೀರದೆಡೆಗೆ ಚಲಿಸುತ್ತಿದೆ. ಈ ಚಂಡಮಾರುತದ ವೇಗ 100-110 ಕಿ.ಮೀ.ನಿಂದ ಗಂಟೆಗೆ 120 ಕಿ.ಮೀ.ವರೆಗೆ ಏರಬಹುದು. ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಪ್ರಮಾಣದ ಗಾಳಿ-ಮಳೆ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಎರಡೂ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ 100-200 ಮಿ.ಮೀ. ಮಳೆಯಾಗುವ ನಿರೀಕ್ಷೆಯಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಬಹುದು ಎಂದೂ ಹೇಳಿದೆ.
ಮಂಗಳವಾರ (ಮೇ 10) ಸಂಜೆಯೊಳಗೆ ಅಸಾನಿ ಚಂಡಮಾರುತ ವಾಯುವ್ಯ ಭಾಗಕ್ಕೆ ಚಲಿಸಿ, ಪಶ್ಚಿಮದ ಮಧ್ಯ ಭಾಗವನ್ನು ಮತ್ತು ಅದಕ್ಕೆ ಹೊಂದಿಕೊಂಡಿರುವ ಒಡಿಶಾ, ಆಂಧ್ರಪ್ರದೇಶದ ಉತ್ತರ ಕರಾವಳಿ ತೀರವನ್ನು ತಲುಪಲಿದೆ. ಅಲ್ಲಿಂದ ಉತ್ತರದ ಈಶಾನ್ಯಕ್ಕೆ ತಿರುಗಿ, ವಾಯುವ್ಯ ಬಂಗಾಳ ಕೊಲ್ಲಿ ತಲುಪಲಿದೆ. ಇನ್ನು 24ಗಂಟೆಯಲ್ಲಿ, ಅಂದರೆ ಬುಧವಾರದ ಹೊತ್ತಿಗೆ ಚಂಡಮಾರುತ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ತುಸು ಜಾಸ್ತಿಯೆನ್ನಿಸುವಷ್ಟು ಚಂಡಮಾರುತ ಬಾಧಿಸಲಿದ್ದು ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ.
ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ಚಂಡಮಾರುತದ ಪ್ರಭಾವ ಎದುರಿಸಲು ಸಕಲ ಸಿದ್ಧತೆಗಳನ್ನೂ ಮಾಡಲಾಗಿದೆ. ಕರಾವಳಿ ತೀರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಒಡಿಶಾದ ಎಲ್ಲ ಬಂದರುಗಳಲ್ಲೂ ರಿಮೋಟ್ ವಾರ್ನಿಂಗ್ ಸಿಗ್ನಲ್ 2 ಎಚ್ಚರಿಕೆ ನೀಡಲಾಗಿದ್ದು, ಅದರ ಅನ್ವಯ ಯಾವುದೇ ಹಡಗುಗಳೂ ಸಾಗರದ ಬಳಿ ಬರುವಂತಿಲ್ಲ. ಮೀನುಗಾರರೂ ಕೂಡ ಸಮುದ್ರದ ಆಸುಪಾಸು ಹೋಗುವಂತಿಲ್ಲ. ಅಂದಹಾಗೇ, ಅಸಾನಿ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳಲ್ಲೂ ಪ್ರಭಾವ ಬೀರಬಹುದು ಎಂದು ಹೇಳಲಾಗಿದೆ.
ಚೆನ್ನೈನಲ್ಲಿ ಅಸಾನಿ ಅವಾಂತರ
ನಿನ್ನೆ ಗಂಭೀರ ಸ್ವರೂಪದಲ್ಲಿ ಇದ್ದ ಅಸಾನಿ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ಏರುಪೇರಾಯಿತು. ನಿನ್ನೆ ಮುಂಬೈ, ಹೈದರಾಬಾದ್, ವಿಶಾಖಪಟ್ಟಣಂ, ಜೈಪುರದಿಂದ ಬರಬೇಕಿದ್ದ ಸುಮಾರು 10 ವಿಮಾನಗಳು ರದ್ದುಗೊಂಡಿವೆ ಎಂದು ಚೆನ್ನೈ ಏರ್‌ಪೋರ್ಟ್ ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ | Floating bridge: ಉದ್ಘಾಟನೆಗೊಂಡ ಮೂರನೇ ದಿನಕ್ಕೇ ಮುರಿದು ಬಿತ್ತು ಮಲ್ಪೆ ತೇಲು ಸೇತುವೆ