ನವದೆಹಲಿ: ಮೇ 9ರಂದು ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಅಸಾನಿ ಚಂಡಮಾರುತ (Cyclone Asani) ತನ್ನ ಪಥ ಬದಲಿಸುತ್ತಿದೆ. ಕಾಕಿನಾಡಾ ಮತ್ತು ವಿಶಾಖಪಟ್ಟಣಂ ಮಧ್ಯ ಭಾಗದಲ್ಲಿ ಆಂಧ್ರಪ್ರದೇಶ ಕರಾವಳಿ ತೀರದ ಸಮೀಪವೇ ಚಂಡಮಾರುತವಿದ್ದು, ಈ ಎರಡೂ ಪ್ರದೇಶಗಳಲ್ಲಿ ಈಗಾಗಲೇ ಮಳೆ ಶುರುವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department (IMD)ತಿಳಿಸಿದೆ. ಹಾಗೆಯೇ, ಆಂಧ್ರದ ಕರಾವಳಿ ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಂದು ಆಂಧ್ರ ಪ್ರದೇಶ ಮತ್ತು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ. ಅದರ ಹೊರತಾಗಿ ಆಂಧ್ರಪ್ರದೇಶದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುತ್ತದೆ ಎಂದು IMD ಮುನ್ಸೂಚನೆ ನೀಡಿದೆ.
ಅಸಾನಿ ಚಂಡಮಾರುತ ಈಗಾಗಲೇ ದುರ್ಬಲಗೊಂಡಿದೆ. ಇದು ಆಂಧ್ರಪ್ರದೇಶದ ಉತ್ತರ ಕರಾವಳಿ ತೀರದಲ್ಲಿರುವ ನರ್ಸಾಪುರದ 34 ಕಿಲೋಮೀಟರ್ ವ್ಯಾಪ್ತಿಯವರೆಗೆ, ಗಂಟೆಗೆ 85 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದೆ. ಇಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆಂಧ್ರಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF)ಯ 9 ತಂಡಗಳನ್ನು ನಿಯೋಜಿಸಲಾಗಿದೆ. ಅಗತ್ಯ ಬಿದ್ದಲ್ಲಿ ನೆರವಾಗಲು ಇನ್ನೂ 7 ತಂಡಗಳು ಸಿದ್ಧವಾಗಿವೆ. ಹಾಗೇ, ಒಡಿಶಾದಲ್ಲಿ ಒಂದು ತಂಡ ಮತ್ತು ಪಶ್ಚಿಮ ಬಂಗಾಳದಲ್ಲಿ 12 ತಂಡಗಳನ್ನು ನಿಯೋಜಿಸಲಾಗಿದೆ. ಈ ಮೂರು ರಾಜ್ಯಗಳಲ್ಲಿ ಅಸಾನಿ ಅಪಾಯವನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ | Floating bridge: ಉದ್ಘಾಟನೆಗೊಂಡ ಮೂರನೇ ದಿನಕ್ಕೇ ಮುರಿದು ಬಿತ್ತು ಮಲ್ಪೆ ತೇಲು ಸೇತುವೆ
ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಗುರುವಾರದವರೆಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ, ಪಶ್ಚಿಮ ಮೇದಿನಿಪುರ, ಉತ್ತರ ಮತ್ತು ದಕ್ಷಿಣ ಪರಗಣ ಮತ್ತು ನಾದಿಯಾ ಜಿಲ್ಲೆಗಳಲ್ಲಿ ಮತ್ತು ಒಡಿಶಾದ ಮಲ್ಕನ್‌ಗಿರಿ, ಕೋರಾಪತ್, ರಾಯಗಢ, ಗಂಜಮ್, ಗಜಪತಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳಗಳಲ್ಲಿ ಭರ್ಜರಿ ಮಳೆಯಿಂದಾಗಿ ಹಾನಿಯಾಗುವ ಸಾಧ್ಯತೆ ಇದೆ. ವಿದ್ಯುತ್ ಕಡಿತ, ಬೆಳೆನಾಶವಾಗಬಹುದು. ಗುಡಿಸಲುಗಳಲ್ಲಿ ವಾಸಿಸುತ್ತಿರುವವರು ಎಚ್ಚರಿಕೆಯಿಂದ ಇರಬೇಕು ಎಂಬ ಎಚ್ಚರಿಕೆಯನ್ನೂ ಐಎಂಡಿ ನೀಡಿದೆ.
ಹಾಗೇ, ವಿಶಾಖಪಟ್ಟಣಂ ಏರ್‌ಪೋರ್ಟ್‌ನಿಂದ ವಿಮಾನ ಹಾರಾಟ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಏರ್‌ಪೋರ್ಟ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಾರಾಟ ನಡೆಸುವುದು ಇಂಡಿಗೋ. ಅದು ತನ್ನ 23 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಏರ್ ಇಂಡಿಯಾ, ಏರ್ ಏಷಿಯಾಗಳೂ ಕೂಡ ಇದೇ ಕ್ರಮ ಕೈಗೊಂಡಿವೆ.
ಇದನ್ನೂ ಓದಿ | Cyclone Asani | ಆಂಧ್ರಪ್ರದೇಶ, ಒಡಿಶಾದತ್ತ ಚಂಡಮಾರುತ; ಮಳೆ-ಪ್ರವಾಹ ಎಚ್ಚರಿಕೆ ನೀಡಿದ IMD