ಚೆನ್ನೈ: ತಮಿಳುನಾಡಿಗೆ ಅಪ್ಪಳಿಸಿರುವ ಮಾಂಡೌಸ್ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆಯಾಗುತ್ತಿದೆ. ಶುಕ್ರವಾರ ರಾತ್ರಿ, ಚಂಡಮಾರುತ ಗಂಟೆಗೆ 75 ಕಿಮೀ ವೇಗದಲ್ಲಿ ತಮಿಳುನಾಡಿನ ಕರಾವಳಿಯನ್ನು ದಾಟಿತ್ತು. ಅದೀಗ ದುರ್ಬಲಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹಾಗೇ, ಮಾಂಡೌಸ್ ವಾಯುವ್ಯಕ್ಕೆ ಚಲಿಸುತ್ತಿದ್ದು, ಆ ಭಾಗದ ಜಿಲ್ಲೆಗಳಲ್ಲಿ ಗಂಟೆಗೆ 55-65 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಂಜೆ ಹೊತ್ತಿಗೆ ಚಂಡಮಾರುತದ ವೇಗ ಗಂಟೆಗೆ 30/40 ಕಿಮೀ ತಗ್ಗಬಹುದು ಎಂದೂ ಮಾಹಿತಿ ನೀಡಿದೆ.
ತಮಿಳುನಾಡಿನಲ್ಲಿ ಚಂಡಮಾರುತದ ಪ್ರಭಾವಕ್ಕೆ ವಿಪರೀತ ಮಳೆಯಾಗಿದ್ದು, ರಾತ್ರಿ 10.30ರ ಹೊತ್ತಿಗೆ ಭೂಕುಸಿತ ಉಂಟಾಗಿದೆ. ಆ ಸಮಯದಲ್ಲಿ ತಮಿಳುನಾಡಿನ ಮಹಾಬಲಿಪುರಂ ಕರಾವಳಿ ಹಾಗೂ ಪುದುಚೇರಿ-ಶ್ರೀಹರಿಕೋಟಾ ಮಧ್ಯ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 75 ಕಿಮೀ ಇತ್ತು. ಚೆನ್ನೈನಲ್ಲಂತೂ ರಸ್ತೆಗಳೆಲ್ಲ ಸಂಪೂರ್ಣ ಜಲಾವೃತಗೊಂಡಿವೆ. ನಗರದಾದ್ಯಂತ 200 ಮರಗಳು ಬುಡಸಮೇತ ಉರುಳಿಬಿದ್ದಿವೆ. ಚೆಂಗಲ್ಪಟ್ಟು ಜಿಲ್ಲೆಯ ಈಸ್ಟ್ ಕೋಸ್ಟ್ ರಸ್ತೆ ಮತ್ತು ಜಿಎಸ್ಟಿ ರಸ್ತೆಗಳಲ್ಲಿ ಕೂಡ ಮರ ಬಿದ್ದು, ಸಂಚಾರಕ್ಕೆ ತೊಡಕಾಗಿದೆ. ವಿದ್ಯುತ್ ಕಡಿತವೂ ಉಂಟಾಗಿದೆ.
ವಿಮಾನ ಸಂಚಾರಕ್ಕೆ ತಡೆ
ಮಾಂಡೌಸ್ನಿಂದಾಗಿ ಹವಾಮಾನ ಬದಲಾವಣೆಯಾಗಿದ್ದರಿಂದ ಮತ್ತು ಭೂಕುಸಿತ ಆಗುತ್ತಿರುವುದರಿಂದ ಚೆನ್ನೈ ಏರ್ಪೋರ್ಟ್ನಿಂದ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಇಲ್ಲಿಗೆ ಬರಬೇಕಿದ್ದ, ಮತ್ತು ಚೆನ್ನೈನಿಂದ ತೆರಳಬೇಕಿದ್ದ ಒಟ್ಟು 13 ದೇಶೀಯ ವಿಮಾನಗಳು ಮತ್ತು ಮೂರು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ತಾತ್ಕಾಲಿಕವಾಗಿ ನಿಲುಗಡೆಯಾಗಿದೆ. ಈ ಬಗ್ಗೆ ಚೆನ್ನೈ ಏರ್ಪೋರ್ಟ್ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ತಮಿಳುನಾಡಿನ ಮೂರು ಜಿಲ್ಲೆಗಳಾದ ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಮತ್ತು ವಿಲ್ಲುಪುರಂನಲ್ಲಿ ರೆಡ್ ಅಲರ್ಟ್ ಇದೆ. ಚೆನ್ನೈ ಸೇರಿ ಒಟ್ಟು 12 ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗಳಿಗೆ ರಜಾ ಘೋಷಿಸಲಾಗಿದೆ. ಮಾಂಡೌಸ್ ಚಂಡಮಾರುತದಿಂದ ಇದುವರೆಗೆ ಭೂಕುಸಿತ-ಮರ ಬಿದ್ದ ಘಟನೆ ಆಗಿದ್ದು ಬಿಟ್ಟರೆ, ಯಾರೂ ಮೃತಪಟ್ಟ-ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. ಇನ್ನು ಚಂಡಮಾರುತ ಪರಿಣಾಮ ಬೀರಲಿರುವ ಜಿಲ್ಲೆಗಳಲ್ಲೆಲ್ಲ ಎನ್ಡಿಆರ್ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ) ಸಿಬ್ಬಂದಿ ಸನ್ನದ್ಧರಾಗಿದ್ದು, ಕರ್ತವ್ಯ ನಿರತರಾಗಿದ್ದಾರೆ. ಹಾಗೇ, ಕರಾವಳಿ ತೀರದ ಜನರನ್ನೆಲ್ಲ ಆಶ್ರಯ ಕೇಂದ್ರಗಳಿಗೆ ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಒಟ್ಟಾರೆ. 5000 ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದೆ. ಚೆಂಗಲ್ಪಟ್ಟು ಒಂದರಿಂದಲೇ 1058 ಕುಟುಂಬಗಳು ಸ್ಥಳಾಂತರಗೊಂಡು, ಆಶ್ರಯ ಕೇಂದ್ರಗಳನ್ನು ಸೇರಿಕೊಂಡಿವೆ.
ಇಂದು ಮಾಂಡೌಸ್ ಚಂಡಮಾರುತ ಆಂಧ್ರಪ್ರದೇಶ, ಪುದುಚೇರಿ ಮತ್ತು ಶ್ರೀಹರಿಕೋಟಾವನ್ನು ದಾಟಲಿದ್ದು, ಅಲ್ಲೂ ಸಹ ಮಳೆ ಮುಂದುವರಿಯಲಿದೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದಲೇ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಮಳೆ-ಶೀತಗಾಳಿ ಪ್ರಾರಂಭವಾಗಿದೆ. ಆಂಧ್ರಪ್ರದೇಶ, ಪುದುಚೇರಿ ಮತ್ತು ತಮಿಳುನಾಡಿನ ಜನರು ಇಂದೂ ಎಚ್ಚರಿಕೆಯಿಂದ ಇರಬೇಕು ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ: Cyclone mandous | ಬೆಂಗಳೂರಿನಲ್ಲಿ ತುಂತುರು ಮಳೆ, ಇನ್ನೂ ಮೂರು ದಿನ ರಾಜಧಾನಿ ಕೂಲ್