ಬಿರುಬೇಸಿಗೆಯಿಂದ ತತ್ತರಿಸುತ್ತಿದ್ದ ದೇಶದಲ್ಲಿ ಈಗ ಅಲ್ಲಲ್ಲಿ ಮತ್ತೆ ಮಳೆಯಾಗುತ್ತಿದೆ. ವಾತಾವರಣ ತಂಪಾಗುತ್ತಿದೆ. ಹೀಗಿರುವಾಗ ಈ ವರ್ಷದ ಮೊದಲ ಚಂಡಮಾರುತ ಏಳುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ (India Meteorological Department) ನೀಡಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೇ 6ರಂದು ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಮೋಚಾ ಎಂದು ಹೆಸರಿಡಲಾಗಿದೆ (Cyclone Mocha) ಎಂದು ಹೇಳಿರುವ ಭಾರತೀಯ ಹವಾಮಾನ ಇಲಾಖೆ, ಚಂಡಮಾರುತ ಯಾವ ರಾಜ್ಯಗಳಿಗೆ ಅಪ್ಪಳಿಸಲಿದೆ, ಎಷ್ಟರ ಮಟ್ಟಿಗೆ ಹಾನಿ ಉಂಟು ಮಾಡಲಿದೆ. ಅದರ ಚಲನೆ ಹೇಗಿರಲಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಲ್ಲ.
ಮೇ 6ರಂದು ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆ ರೂಪುಗೊಳ್ಳಲಿದೆ. ಅದಾದ ಬಳಿಕ 48ಗಂಟೆಗಳಲ್ಲಿ (ಮೇ 7,8) ರಂದು ಅದೇ ಸ್ಥಳದಲ್ಲಿ (ಪರಿಚಲನೆ ಶುರುವಾದಲ್ಲಿ) ವಾಯುಭಾರ ಕುಸಿತವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮೋಹಪಾತ್ರಾ ’ಚಂಡಮಾರುತದ ರಚನೆ ಮತ್ತು ಚಲನೆಗೆ ಸಂಬಂಧಪಟ್ಟಂತೆ ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳಲಿದೆ. ಪ್ರಾರಂಭದಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬೀಸುವ ಗಾಳಿ, ಮೇ 7ರಿಂದ ಗಂಟೆಗೆ 60 ಕಿಮೀ ವೇಗ ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ, ಆಗ್ನೇಯ ಬಂಗಾಳಕೊಲ್ಲಿ ಮತ್ತು ಸಮೀಪದ ಕರಾವಳಿ ತೀರಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಅಲ್ಲಿ ವಾಸವಾಗಿರುವರು ಮೇ 7ರ ಒಳಗೆ ಬೇರೆ ಕಡೆಗೆ ಹೋಗಬೇಕು. ಪೂರ್ವ ಕರಾವಳಿಗೆ ಅಂಥ ಅಪಾಯವಾಗುವ ಸನ್ನಿವೇಶ ಇಲ್ಲ’ ಎಂದಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಎಚ್ಚರಿಕೆ ಇರಬೇಕು ಎಂದು ಅವರು ತಿಳಿಸಿದ್ದಾರೆ.