Site icon Vistara News

Cyclone Sitrang | ಬಾಂಗ್ಲಾದೇಶದಲ್ಲಿ ಸಿಟ್ರಾಂಗ್​​​ ಚಂಡಮಾರುತದ ಅಬ್ಬರ, 9 ಜನ ಸಾವು; ಪಶ್ಚಿಮ ಬಂಗಾಳದಲ್ಲೂ ಗಾಳಿ ಜೋರು

Cyclone Sitrang Hits Bangladesh 9 killed

ಢಾಕಾ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ಸಿಟ್ರಾಂಗ್​ ಚಂಡಮಾರುತ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು, ತನ್ನ ರೌದ್ರಾವತಾರ ತೋರಿಸುತ್ತಿದೆ. ಬಾಂಗ್ಲಾದೇಶದ ಹಲವು ಭಾಗಗಳನ್ನು ಜಜ್ಜರಿತಗೊಳಿಸುತ್ತಿರುವ ಸಿಟ್ರಾಂಗ್​ ಈಗಾಗಲೇ 9 ಮಂದಿಯ ಪ್ರಾಣ ಬಲಿಪಡೆದಿದೆ. ಹೀಗೆ ಮೃತಪಟ್ಟವರಲ್ಲಿ ಒಂದೇ ಕುಟುಂಬದ ಮೂವರೂ ಸೇರಿದ್ದಾರೆ. ಮನೆಗಳ ಗೋಡೆ, ಕಾಂಪೌಡ್​ಗಳು ಕುಸಿದು ಬೀಳುತ್ತಿವೆ. ಮರಗಳೂ ಉರುಳುತ್ತಿವೆ.

ಬಾಂಗ್ಲಾದೇಶದಲ್ಲಿ ಸಿಟ್ರಾಂಗ್​ ಚಂಡಮಾರುತ ಪ್ರಭಾವ ತೀವ್ರತರನಾಗಿದೆ. ಢಾಕಾ, ಕ್ಯುಮಿಲ್ಲಾ ದೌಲತ್​ಖಾನ್​​ನಲ್ಲಿರುವ ನಾಗಲ್​ಕೋಟ್​, ಭೋಲಾದಲ್ಲಿರುವ ಚಾರ್ಫೆಸನ್​​, ನರೈಲ್​​ನಲ್ಲಿರುವ ಲೋಹಗಾರ ಪ್ರದೇಶಗಳಲ್ಲಿ ಚಂಡಮಾರುತದ ಕಾರಣಕ್ಕೆ ಸಿಕ್ಕಾಪಟೆ ಮಳೆಯಾಗುತ್ತಿದೆ. ಗಾಳಿಯ ಅಬ್ಬರವೂ ಜೋರಾಗಿದೆ. ಅಲ್ಲಿನ ಜನರ ರಕ್ಷಣಾ ಕಾರ್ಯಾಚರಣೆಗಾಗಿ ಅಗ್ನಿಶಾಮಕ ದಳಗಳ ಸಿಬ್ಬಂದಿ, ನಾಗರಿಕಾ ರಕ್ಷಣಾ ದಳದವರು ಸನ್ನದ್ಧರಾಗಿದ್ದಾರೆ.

ಚಂಡಮಾರುತದ ಪರಿಣಾಮಕ್ಕೆ ಒಳಗಾದ ಪ್ರದೇಶಗಳಿಂದ ಸಾವಿರಾರು ಜನರು, ಪಶುಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಕಾಕ್ಸ್ ಬಜಾರ್ ಕರಾವಳಿ ತೀರದಲ್ಲಿ ವಾಸವಾಗಿದ್ದ 28,155 ಜನರು ಮತ್ತು ಅವರಿಗೆ ಸೇರಿದ 2,736 ಜಾನುವಾರುಗಳನ್ನು ಅಲ್ಲಿಂದ ಸ್ಥಳಾಂತರ ಮಾಡಿ, ಆಶ್ರಯಕೇಂದ್ರದಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಡಲಾಗಿದೆ. ಒಟ್ಟು 576 ಶೆಲ್ಟರ್​ಗಳನ್ನು ನಿರ್ಮಿಸಲಾಗಿದ್ದು ಯಾರಿಗೂ ತೊಂದರೆಯಾಗದಂತೆ ಎಚ್ಚರವಹಿಸಲಾಗುತ್ತಿದೆ ಎಂದು ಕಾಕ್ಸ್​ ಬಜಾರ್​ ಉಪ ಆಯುಕ್ತ ಮಾಮೂನೂರ್ ರಶೀದ್​ ತಿಳಿಸಿದ್ದಾರೆ. ‘ಇನ್ನು 104 ವೈದ್ಯಕೀಯ ತಂಡಗಳು ಸಜ್ಜಾಗಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ ಅವರ ಸೇವೆ ತಕ್ಷಣವೇ ಲಭಿಸಲಿದೆ. ಹಾಗೇ, ಚಂಡಮಾರುತದ ಕಾರಣಕ್ಕೆ ಮನೆಯಿಂದ ಹೊರಗೆ ಬಂದು ಆಶ್ರಯ ಕೇಂದ್ರಗಳಲ್ಲಿ ಇರುವವರಿಗಾಗಿಯೇ ಅಕ್ಕಿ, ಒಣ ಆಹಾರಗಳು, ಒಣ ಕೇಕ್​, ಬಿಸ್ಕಿಟ್​​ಗಳನ್ನೂ ನೀಡಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಗಾಳಿ ಜೋರು
ಸಿಟ್ರಾಂಗ್ ಚಂಡಮಾರುತದ ಪಶ್ಚಿಮ ಬಂಗಾಳದ ಮೇಲೆ ಕೂಡ ಪ್ರಭಾವ ಬೀರುತ್ತಿದೆ. ಅಲ್ಲಿ ಗಾಳಿಯ ಅಬ್ಬರ ಈಗಾಗಲೇ ಭಯಂಕರವಾಗಿ ಶುರುವಾಗಿದ್ದು, ಕೂಚ್​ ಬೆಹಾರ್​​ನಲ್ಲಿ ಕಾಳಿಪೂಜೆಗಾಗಿ ಹಾಕಿದ್ದ ಪೆಂಡಾಲ್​ ಕುಸಿದುಬಿದ್ದಿದ್ದಾಗಿ ವರದಿಯಾಗಿದೆ. ಒಡಿಶಾ-ಪಶ್ಚಿಮ ಬಂಗಾಳದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಇದನ್ನೂ ಓದಿ: Cyclone Sitrang | ಇನ್ನು ನಾಲ್ಕು ದಿನಗಳಲ್ಲಿ ಅಪ್ಪಳಿಸಲಿದೆ ಸಿತ್ರಾಂಗ್​ ಚಂಡಮಾರುತ; ಒಡಿಶಾದಲ್ಲಿ ಅಲರ್ಟ್​

Exit mobile version