ನವ ದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಈಗ ಎದ್ದಿರುವ ಗಾಳಿ ಮುಂದಿನ ನಾಲ್ಕು ದಿನಗಳಲ್ಲಿ ಚಂಡಮಾರುತವಾಗಿ (Cyclone Sitrang) ಮಾರ್ಪಾಡಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಸದ್ಯ ಬಂಗಾಳಕೊಲ್ಲಿಯ ಆಗ್ನೇಯ ಮತ್ತು ಪೂರ್ವ-ಮಧ್ಯ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ಉಂಟಾಗಿದ್ದು, ಅಕ್ಟೋಬರ್ 22ರ ಹೊತ್ತಿಗೆ ಇನ್ನಷ್ಟು ವಾಯುಭಾರ ಕುಸಿತವಾಗಲಿದೆ. ಅಕ್ಟೋಬರ್ 24ರ ವೇಳೆಗೆ ಚಂಡಮಾರುತ ಏಳಬಹುದು, ಈ ಸೈಕ್ಲೋನ್ ಅಕ್ಟೋಬರ್ 25ರ ಹೊತ್ತಿಗೆ ಒಡಿಶಾದಿಂದ ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಕರಾವಳಿ ತೀರ ತಲುಪಲಿದೆ ಎಂದು ಹೇಳಲಾಗಿದೆ. ಅಂದಹಾಗೇ, ಈ ಚಂಡಮಾರುತಕ್ಕೆ ಸಿತ್ರಾಂಗ್ ಎಂದು ಹೆಸರಿಸಲಾಗಿದೆ.
ಇದೀಗ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉತ್ತರ ಅಂಡಮಾನ್ ಸಾಗರ ಮತ್ತು ಬಂಗಾಳಕೊಲ್ಲಿಯ ಆಗ್ನೇಯ ಭಾಗಗಳಲ್ಲಿ ತಾಸಿಗೆ 31 ಕಿಮೀ ವೇಗದ ಗಾಳಿ ಬೀಸುತ್ತಿದೆ. ಅಕ್ಟೋಬರ್ 23ರ ವೇಳೆಗೆ ಗಂಟೆಗೆ 51/61 ಕಿಮೀ ವೇಗ ಪಡೆದು, ಬೀಸಲಿದೆ. ಚಂಡಮಾರುತವಾಗಿ ಇನ್ನಷ್ಟು ವೇಗ ಪಡೆದುಕೊಂಡು ಒಡಿಶಾ ಪ್ರವೇಶಿಸಿ ಅಲ್ಲಿಂದ ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಕರಾವಳಿ ತೀರಕ್ಕೆ ಪ್ರವೇಶ ಮಾಡಲಿದೆ.
ಅಕ್ಟೋಬರ್ 26ರವರೆಗೂ ಒಡಿಶಾ, ಪಶ್ಚಿಮ ಬಂಗಾಳ ಕರಾವಳಿ ತೀರದ ಜನರು ಎಚ್ಚರಿಕೆಯಿಂದ ಇರಬೇಕು. ಅಕ್ಟೋಬರ್ 22ರಿಂದ 26ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂದಹಾಗೇ, ಇದೀಗ ಎದ್ದಿರುವ ಚಂಡಮಾರುತ ಸಿತ್ರಾಂಗ್ 2022ರ ಎರಡನೇ ಸೈಕ್ಲೋನ್. 1981ರಿಂದ ಅಕ್ಟೋಬರ್ ತಿಂಗಳಲ್ಲಿ ಎದ್ದಿರುವ ಚಂಡಮಾರುತಗಳಲ್ಲಿ ಇಲ್ಲಿಯವರೆಗೆ ಕೇವಲ 15 ಮಾತ್ರ ಒಡಿಶಾ ಕರಾವಳಿಯನ್ನು ದಾಟಿವೆ.
ಇದನ್ನೂ ಓದಿ: Cyclone Asani | ಪಥ ಬದಲಿಸುತ್ತಿದೆ ಚಂಡಮಾರುತ: ಆಂಧ್ರ ಪ್ರದೇಶದಲ್ಲಿ ರೆಡ್ ಅಲರ್ಟ್