ಮುಂಬಯಿ ಸಮೀಪ ರಸ್ತೆ ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ದಿನ್ ಶಾ ಪಂಡೋಳೆ ಶವ ಪರೀಕ್ಷೆ ವರದಿ ಇಂದು ಹೊರಬಿದ್ದಿದೆ. ‘ಅಪಘಾತದಿಂದ ಇವರಿಬ್ಬರ ತಲೆಗೂ ಭಾರಿ ಪೆಟ್ಟು ಬಿದ್ದಿದ್ದಲ್ಲದೆ, ದೇಹದ ಹೊರಭಾಗಕ್ಕೆ ಮತ್ತು ಒಳಭಾಗಕ್ಕೆ ತೀವ್ರತರ ಹೊಡೆತ ಬಿದ್ದ ಪರಿಣಾಮ ಪ್ರಮುಖ ಅಂಗಗಳಿಗೆಲ್ಲ ಗಂಭೀರವಾಗಿ ಗಾಯವಾಗಿತ್ತು’ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಸೈರಸ್ ಮಿಸ್ತ್ರಿ, ಅವರ ಸ್ನೇಹಿತ ಜಹಾಂಗೀರ್ ದಿನ್ ಶಾ ಪಂಡೋಳೆ, ಡಾ. ಅನಾಹಿತ ಪಂಡೋಳೆ ಮತ್ತು ಡೇರಿಯಸ್ ಪಂಡೋಳೆ ಎಂಬುವರು ಸೆಪ್ಟೆಂಬರ್ 4ರಂದು ಗುಜರಾತ್ನ ಅಹ್ಮದಾಬಾದ್ನಿಂದ ಮುಂಬಯಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಪಾಲ್ಘರ್ ಬಳಿಯ ಸೂರ್ಯನದಿ ಸೇತುವೆ ಬಳಿ ಇವರ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಅದರಲ್ಲಿ ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಳೆ ಮೃತಪಟ್ಟಿದ್ದಾರೆ. ಇವರಿಬ್ಬರ ಪೋಸ್ಟ್ಮಾರ್ಟಮ್ನ್ನು ಜೆಜೆ ಆಸ್ಪತ್ರೆಯಲ್ಲಿ ಮಾಡಲಾಗಿತ್ತು.
‘ಮಿಸ್ತ್ರಿ ಮತ್ತು ಜಹಾಂಗೀರ್ ಇಬ್ಬರಿಗೂ ತಲೆಗೆ ಬಲವಾಗಿ ಏಟು ಬಿದ್ದಿದ್ದರಿಂದ ಮಿದುಳಿನಲ್ಲಿ ರಕ್ತಸ್ರಾವ ಆಗಿದೆ. ಸೈರಸ್ ಮಿಸ್ತ್ರಿ ಎದೆ, ತೊಡೆ, ಕುತ್ತಿಗೆಯ ಭಾಗವೆಲ್ಲ ಫ್ರ್ಯಾಕ್ಚರ್ ಆಗಿತ್ತು. ನೂರು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದ ಕಾರು ಒಮ್ಮೆಲೇ ಜೀರೋಕ್ಕೆ ಬಿದ್ದಾಗ ಉಂಟಾಗುವ ಅಪಘಾತದಿಂದ ಇಷ್ಟು ಗಂಭೀರ ಸ್ವರೂಪದ ಗಾಯಗಳಾಗಲು ಸಾಧ್ಯ. ಇದೇ ಕಾರಣಕ್ಕೆ ಮಿಸ್ತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ’ ಎಂದೂ ವೈದ್ಯರು ಹೇಳಿದ್ದಾರೆ.
ಇದೀಗ ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ದಿನ್ ಶಾ ಪಂಡೋಳೆ ಅವರ ವಿಸ್ಕೆರಾ ಮಾದರಿಗಳನ್ನು ಕಲಿನಾದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅಂದರೆ ಇವರ ದೇಹದಲ್ಲಿ ಯಾವುದಾದರೂ ಕೆಮಿಕಲ್, ಅಲ್ಕೋಹಾಲ್, ವಿಷಕಾರಿ ಅಂಶಗಳು ಇದ್ದಿದ್ದವಾ ಎಂಬುದನ್ನು ಪತ್ತೆಹಚ್ಚಲು, ಅವರ ಶರೀರದ ಪ್ರಮುಖ ಅಂಗಗಳನ್ನು ಪರೀಕ್ಷೆಗೆ ಒಳಪಡಿಸಲು ಈ ವಿಸ್ಕೆರಾ ಪರೀಕ್ಷೆ ನಡೆಯಲಿದೆ. ಅಷ್ಟೇ ಅಲ್ಲ, ಡಿಎನ್ಎ ತಪಾಸಣೆಗೂ ಮಾದರಿ ಸಂಗ್ರಹಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Cyrus Mistry Death | ಸೈರಸ್ ಮಿಸ್ತ್ರಿ: ಉದ್ಯಮ ಜಗತ್ತನ್ನು ಬಿಟ್ಟು ನಡೆದ ದಿಗ್ಗಜ