ರಾಜಸ್ಥಾನದ ಜೋಧ್ಪುರದಲ್ಲಿ (Jodhpur News) 17ವರ್ಷದ ದಲಿತ ಯುವತಿ ಮೇಲೆ, ಆಕೆಯ ಬಾಯ್ಫ್ರೆಂಡ್ ಎದುರಲ್ಲೇ ಗ್ಯಾಂಗ್ರೇಪ್ (Molestation Case) ಆಗಿದೆ. ಇಂದು ಮುಂಜಾನೆ 4ಗಂಟೆ ಹೊತ್ತಿಗೆ, ವಿಶ್ವ ವಿದ್ಯಾಲಯವೊಂದರ ಕ್ಯಾಂಪಸ್ನಲ್ಲಿ ಹುಡುಗಿ ಮೇಲೆ ಅತ್ಯಾಚಾರ ಮಾಡಿದ ಮೂವರು ದುರುಳರನ್ನು ಪೊಲೀಸರು ಬಂಧಿಸಿದ್ದಾರೆ.
17 ವರ್ಷದ ಈ ಯುವತಿ ಅಜ್ಮೇರ್ನಲ್ಲಿರುವ ತನ್ನ ಮನೆ ಬಿಟ್ಟು, ಬಾಯ್ಫ್ರೆಂಡ್ ಜತೆಗೆ ಶನಿವಾರ ರಾತ್ರಿ ಓಡಿ ಬಂದಿದ್ದಳು. ಆತನೂ ಅಪ್ರಾಪ್ತ ವಯಸ್ಸಿನ ಬಾಲಕ. ಇಬ್ಬರೂ ಬಸ್ನಲ್ಲಿ ಜೋಧ್ಪುರ ಬಸ್ಸ್ಟ್ಯಾಂಡ್ಗೆ ಬಂದು ಇಳಿದಿದ್ದರು. ರಾತ್ರಿಯಾಗಿದ್ದರಿಂದ ಅಲ್ಲೇ ಬಸ್ಸ್ಟ್ಯಾಂಡ್ ಸಮೀಪ ಎಲ್ಲಾದರೂ ಉಳಿಯಲು ಜಾಗ ಸಿಗಬಹುದು ಎಂದು ಹುಡುಕಿದರು. ಆದರೆ ಎಲ್ಲಿಯೂ ಸಿಗಲಿಲ್ಲ. ಹುಡುಗ-ಹುಡುಗಿ ಇಬ್ಬರೂ ರಸ್ತೆಯಲ್ಲಿ ನಡೆದುಕೊಂಡೇ ಹೋಗುತ್ತಿದ್ದಾಗ, ಪವಾಟಾ ಸರ್ಕಲ್ ಬಳಿ ಅವರನ್ನು ಮೂವರು ತಡೆದರು. ಏನಾದರೂ ಸಹಾಯ ಬೇಕಾ ಎಂದು ಕೇಳಿದರು. ಈ ಹುಡುಗ ಹುಡುಗಿ ಅವರನ್ನು ಸಹಜವಾಗಿಯೇ ನಂಬಿದರು.
ಬಳಿಕ ಆ ಮೂವರು ಹುಡುಗರು ಪ್ರೇಮಿಗಳಿಗೆ ತಿನ್ನಲು ತಿಂಡಿ ಕೊಟ್ಟರು. ನೀವು ಒಂದು ಕೆಲಸ ಮಾಡಿ ರೈಲು ಹತ್ತಿಬಿಡಿ. ಹೋಗಬೇಕಾದಲ್ಲಿಗೆ ಹೋಗಬಹುದು ಎಂದು ಸಲಹೆಯನ್ನೂ ನೀಡಿದರು. ದಲಿತ ಯುವತಿ ಮತ್ತು ಆಕೆಯ ಬಾಯ್ಫ್ರೆಂಡ್ ತಮಗೆ ರೈಲ್ವೆ ನಿಲ್ದಾಣಕ್ಕೆ ಹೋಗುವ ದಾರಿ ಗೊತ್ತಿಲ್ಲ ಎಂದು ಹೇಳಿದ್ದಕ್ಕೆ, ನೀವು ನಮ್ಮನ್ನು ಫಾಲೊ ಮಾಡಿ, ನಾವು ಕರೆದುಕೊಂಡು ಹೋಗುತ್ತೇವೆ ಎಂದಿದ್ದಾರೆ. ಆಗ ತಡರಾತ್ರಿಯಾಗಿತ್ತು. ಸುಮಾರು ಮುಂಜಾನೆ 4ಗಂಟೆ ಹೊತ್ತಿಗೆ ಅಲ್ಲಿಯೇ ಇದ್ದ ಯೂನಿವರ್ಸಿಟಿ ಕ್ಯಾಂಪಸ್ವೊಳಗೆ ಮೂವರು ಯುವಕರು ಹೋದರು. ಮುರಿದ ಗೋಡೆಯನ್ನು ದಾಟಿ ಅಲ್ಲಿ ಕಾಲಿಟ್ಟ ಅವರು, ಈ ಹುಡುಗಿ-ಹುಡಗನ ಬಳಿಯೂ ಒಳ ಬರುವಂತೆ ಹೇಳಿದರು. ಅವರನ್ನು ನಂಬಿ ಇಬ್ಬರೂ ಒಳ ಹೋದಾಗ ಯುವಕರು ಹುಡುಗಿ ಮೇಲೆ ರೇಪ್ ಮಾಡಿದ್ದಾರೆ. ಹುಡುಗನಿಗೂ ಥಳಿಸಿದ್ದಾರೆ. ಇನ್ನೂ ಚಿಕ್ಕ ವಯಸ್ಸಿನ ಆ ಹುಡುಗ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ನಿಂತಿದ್ದ.
ಇದನ್ನೂ ಓದಿ: Physical Abuse: ಬೆಂಗಳೂರಿನಲ್ಲಿ ಯುವತಿ ಮೇಲೆ ಪ್ರಿಯಕರ ಸೇರಿ ಐವರಿಂದ ಗ್ಯಾಂಗ್ ರೇಪ್
ಐದು ಗಂಟೆವರೆಗೂ ಹುಡುಗಿಗೆ ಚಿತ್ರಹಿಂಸೆ ಕೊಟ್ಟ ಮೂವರು ಯುವಕರು ಬಳಿಕ ಅಲ್ಲಿಂದ ಓಡಿಹೋಗಿದ್ದಾರೆ. ಅಷ್ಟರಲ್ಲಿ ಹಲವರು ಬೆಳಗಿನ ವಾಕಿಂಗ್ಗೆ ಕೂಡ ಬರಲು ಶುರುಮಾಡಿದ್ದೂ ಅವರಲ್ಲಿ ಭಯ ಹುಟ್ಟಿಸಿತ್ತು. ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ದೀನ ಸ್ಥಿತಿಯಲ್ಲಿ ಇದ್ದ ಇವರಿಬ್ಬರನ್ನೂ ದಾರಿಹೋಕರು ಒಬ್ಬರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ದೂರು ದಾಖಲಿಸಿಕೊಂಡ ಬಳಿಕ ಡಿಸಿಪಿ ದುಹಾನ್ ಮತ್ತು ಪೊಲೀಸ್ ಆಯುಕ್ತ ರವಿದತ್ ಗೌರ್ ಇಬ್ಬರೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಾದ ಸಮಾಂದರ್ ಸಿಂಗ್ (21), ಭಟ್ಟಮ್ ಸಿಂಗ್ (22), ಧರ್ಮಪಾಲ್ ಸಿಂಗ್ (21) ನನ್ನು ಬಂಧಿಸಲಾಗಿದೆ. ಅತ್ಯಾಚಾರಕ್ಕೀಡಾದ ಯುವತಿಯನ್ನು ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.