ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಲ್ಲಿ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಬಾಲಕಿಯರ ಮೃತದೇಹ ಬುಧವಾರ ಮಧ್ಯಾಹ್ನ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ಘಟನೆಗೆ ಸಂಬಂಧ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ‘ತಾವು ಬಾಲಕಿಯರನ್ನು ಅತ್ಯಾಚಾರ ಮಾಡಿ, ಹತ್ಯೆಗೈದಿದ್ದೇವೆ’ ಎಂದು ಅವರೆಲ್ಲರೂ ಒಪ್ಪಿಕೊಂಡಿದ್ದಾರೆ. ಚೋಟು, ಜುನೈದ್, ಸೊಹೈಲ್, ಹಫೀಜುಲ್, ಕರಿಮುದ್ದೀನ್ ಮತ್ತು ಆರಿಫ್ ಎಂಬುವರು ಅರೆಸ್ಟ್ ಆಗಿದ್ದು, ಅದರಲ್ಲಿ ಜುನೈದ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡೇಟು ಕೊಟ್ಟು ವಶಕ್ಕೆ ಪಡೆದಿದ್ದಾರೆ.
ಇವರಲ್ಲಿ ಮುಖ್ಯ ಆರೋಪಿ ಚೋಟು ಆಗಿದ್ದಾನೆ. ಅವನೇ ಇಬ್ಬರು ಸಹೋದರಿಯರನ್ನು ಉಳಿದ ಆರೋಪಿಗಳಿಗೆ ಪರಿಚಯಿಸಿದ್ದ. ಈ ಇಬ್ಬರು ಹುಡುಗಿಯರಲ್ಲಿ ಒಬ್ಬಾಕೆಯನ್ನು ಚೋಟುವಿನ ಗೆಳೆಯರ ಬಳಗದ (ಆರೂ ಆರೋಪಿಗಳು) ಒಬ್ಬಾತ ಮದುವೆಯಾಗಲು ಇಚ್ಛಿಸಿದ್ದ. ಇಬ್ಬರು ಹುಡುಗಿಯರು ಮತ್ತು ಹುಡುಗರ ನಡುವೆ ಈ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಚೋಟು ಕಡೆಯವರು ಹುಡುಗಿಯರನ್ನು ಅಪಹರಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಹುಡುಗಿಯರ ಮೃತದೇಹ ಸಮೀಪದ ಕಬ್ಬಿನ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರಿಯರು ಇಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೂ ಅದು ಆತ್ಮಹತ್ಯೆಯಲ್ಲ ಎಂದು ಮೊದಲು ಪ್ರತಿಪಾದಿಸಿದ್ದು ಅವರ ತಾಯಿ. ‘ನನ್ನ ಮಕ್ಕಳನ್ನು ಮೇಲ್ಜಾತಿಯವರು ರೇಪ್ ಮಾಡಿ ಕೊಂದಿದ್ದಾರೆ. ’ ಎಂದು ಆಕೆ ಹೇಳಿದ್ದರು. ಇದೀಗ ಬಂಧಿತರಾದವರೆಲ್ಲ ಮುಸ್ಲಿಮರಾಗಿದ್ದಾರೆ. ಹುಡುಗಿಯರ ಮೃತದೇಹವನ್ನು ಪೋಸ್ಟ್ ಮಾರ್ಟಮ್ಗೆ ಕಳಿಸಲಾಗಿದೆ. ಈ ಘಟನೆ ನಡೆದಿದ್ದು ನಿಘಸನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾಗಿದ್ದು, ಅಲ್ಲೀಗ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತ ಬಾಲಕಿಯರ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ. ಎಸ್ಪಿ ಸಂಜೀವ್ ಸುಮನ್ ಮತ್ತು ಎಎಸ್ಪಿ ಅರುಣ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಆಕ್ರೋಶಿತ ಸಾರ್ವಜನಿಕರನ್ನು ಸಂಭಾಳಿಸುತ್ತಿದೆ.
ಪ್ರಿಯಾಂಕಾ ಗಾಂಧಿ ಆಕ್ರೋಶ
ಲಖಿಂಪುರ ಖೇರಿಯಲ್ಲಿ ದಲಿತ ಸಮುದಾಯದ ಇಬ್ಬರು ಬಾಲಕಿಯರ ಅತ್ಯಾಚಾರ ಮತ್ತು ಹತ್ಯೆಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಖಂಡಿಸಿದ್ದಾರೆ. ಟ್ವೀಟ್ ಮಾಡಿದರ ಅವರು, ‘ಇಬ್ಬರು ಅಪ್ರಾಪ್ತೆಯರಿಗೆ ಬಂದೊದಗಿದ ಸಾವು ಹೃದಯ ವಿದ್ರಾವಕವಾಗಿದೆ. ಹಾಡಹಗಲಲ್ಲೇ ಹುಡುಗಿಯರನ್ನು ಅಪಹರಿಸಲಾಗಿದೆ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಸುದ್ದಿ ಪತ್ರಿಕೆ, ಟಿವಿಗಳಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಸುಳ್ಳುಸುಳ್ಳೆ ಜಾಹೀರಾತು ಕೊಟ್ಟ ತಕ್ಷಣ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುವುದಿಲ್ಲ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಮಿತಿಮೀರುತ್ತಿವೆ. ಸರ್ಕಾರ ಇನ್ಯಾವಾಗ ಎಚ್ಚೆತ್ತುಕೊಳ್ಳುತ್ತದೆ? ಎಂದು ಪ್ರಶ್ನಿಸಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಲಖಿಂಪುರ ಕೇರಿಯಲ್ಲಿ 2 ದಲಿತ ಬಾಲಕಿಯರು ಮರಕ್ಕೆ ನೇಣು | ರೇಪ್ ಮಾಡಿ ಕೊಲೆಗೈದ ಶಂಕೆ