ನವ ದೆಹಲಿ: ಹಿಂದು ಧರ್ಮದಲ್ಲಿರುವ ದಲಿತರು ಇಸ್ಲಾಂ, ಕ್ರೈಸ್ತರಾಗಿ ಮತಾಂತರಗೊಂಡ ಬಳಿಕವೂ ಅವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ಕೊಟ್ಟು, ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಆ ಎರಡು ಧರ್ಮಗಳಲ್ಲಿ ಹಿಂದುಳಿದ ವರ್ಗವಾಗಲೀ, ಶೋಷಣೆಯಾಗಲೀ ಇಲ್ಲದ ಕಾರಣ, ಹಿಂದು ಧರ್ಮದಿಂದ ಅಲ್ಲಿಗೆ ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನವನ್ನಾಗಲೀ, ಮೀಸಲಾತಿಯನ್ನಾಗಲೀ ವಿಸ್ತರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಹಿಂದು ದಲಿತರು ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರವೂ ಅವರಿಗೆ ಪರಿಶಿಷ್ಟ ಜಾತಿ ಸ್ಥಾನ ಮಾನ ಮುಂದುವರಿಸಬೇಕು. ಹಿಂದು ಧರ್ಮದಲ್ಲಿ ಇದ್ದಾಗ ಅವರು ಅನುಭವಿಸುತ್ತಿದ್ದ ಮೀಸಲಾತಿ ಮತ್ತು ಇತರ ಅನುಕೂಲಗಳನ್ನು ಮತಾಂತರಗೊಂಡ ನಂತರವೂ ಅವರಿಗೆ ಲಭ್ಯ ಮಾಡಬೇಕು. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡಿ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಎನ್ಜಿಒ ಒಂದು ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸುಪ್ರೀಂಕೋರ್ಟ್ ಪ್ರತಿಕ್ರಿಯೆ ಕೇಳಿತ್ತು.
ಅಫಿಡಿವಿಟ್ ಸಲ್ಲಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ‘ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶ 1950ರಲ್ಲಿ ಯಾವುದೇ ಅಸಾಂವಿಧಾನಿಕ ಅಂಶಗಳಿಲ್ಲ. ಅದರಲ್ಲಿರುವ ಎಲ್ಲವೂ ಕಾನೂನು ಬದ್ಧವಾಗಿವೆ ಮತ್ತು ಮಾನ್ಯವಾಗಿವೆ’ ಎಂದು ಹೇಳಿದೆ. ಹಿಂದು ಧರ್ಮದ ಹೊರತಾಗಿ, ಇನ್ಯಾವುದೇ ಧರ್ಮವನ್ನು ಪ್ರತಿನಿಧಿಸುವ ವ್ಯಕ್ತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಾಧ್ಯವಿಲ್ಲ ಎಂಬುದನ್ನು ಸಂವಿಧಾನದ 1950ರ ಆದೇಶದಲ್ಲಿ ಉಲ್ಲೇಖಿಸಲಾಗಿದ್ದು. ಅದೇ ವಿಷಯವನ್ನು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅಫಿಡಿವಿಟ್ನಲ್ಲಿ ಎತ್ತಿಹಿಡಿದಿದೆ.
ಇತಿಹಾಸದಿಂದ ಸಂಗ್ರಹಿಸಲಾದ ಹಲವು ಮಹತ್ವದ ಡಾಟಾಗಳನ್ನು ಆಧರಿಸಿ ಸೂಕ್ತ ಅಧ್ಯಯನವನ್ನು ನಡೆಸಿದ ಬಳಿಕ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಿ ಹಿಂದುಳಿದ ವರ್ಗವಾಗಲೀ, ದಬ್ಬಾಳಿಕೆಗೆ ಒಳಪಟ್ಟ ವರ್ಗವಾಗಲಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಅದರ ಆಧಾರದ ಮೇಲೆಯೇ ಸಂವಿಧಾನದ 1950ನೇ ಆದೇಶ ಹೊರಬಿದ್ದಿದೆ. ಅಷ್ಟೇ ಅಲ್ಲ, ಹಿಂದು ಧರ್ಮದಿಂದ ದಲಿತರು ಇಸ್ಲಾಂ-ಕ್ರಿಶ್ಚಿಯನ್ ಧರ್ಮಕ್ಕೆ ಸೇರುವುದೇ ಇಲ್ಲಿರುವ ಅಸ್ಪೃಶ್ಯತೆ ಮತ್ತು ದಬ್ಬಾಳಿಕೆಯಿಂದ ಮುಕ್ತಿಪಡೆಯಲು ಎಂಬುದೂ ಅಧ್ಯಯನದಿಂದ ಗೊತ್ತಾಗಿದೆ. ಹೀಗಾಗಿ ಇಲ್ಲಿಂದ, ಅಲ್ಲಿಗೆ ಹೋದ ಬಳಿಕ ಅವರಿಗೆ ಮೀಸಲಾತಿಯನ್ನಾಗಲೀ, ಪರಿಶಿಷ್ಟ ಜಾತಿ ಸ್ಥಾನಮಾನವನ್ನಾಗಲೀ ಮುಂದುವರಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಉಲ್ಲೇಖ ಮಾಡಿದೆ.
ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಹಿಂದು ದಲಿತರ ಸ್ಥಿತಿಗತಿ ಅಧ್ಯಯನ ನಡೆಸಿದ್ದ ನ್ಯಾ.ರಂಗನಾಥ ಮಿಶ್ರಾ ಆಯೋಗ ‘ಹಿಂದು ಧರ್ಮದಿಂದ ಕ್ರೈಸ್ತ, ಇಸ್ಲಾಂ ಧರ್ಮಗಳಿಗೆ ಸೇರಿದ ದಲಿತರನ್ನು ದಲಿತ ಕ್ರಿಶ್ಚಿಯನ್ನರು, ದಲಿತ ಮುಸ್ಲಿಮರು ಎಂದೇ ಪರಿಗಣಿಸಿ ಅವರಿಗೂ ಮೀಸಲಾತಿ ನೀಡಬೇಕು’ ಎಂದೇ ವರದಿ ಕೊಟ್ಟಿತ್ತು. ಆದರೆ ಈ ವರದಿ ದೋಷಪೂರಿತವಾಗಿ, ಆಳವಾದ ಸಂಶೋಧನೆ ಹೊಂದಿಲ್ಲ’ ಎಂದೇ ಕೇಂದ್ರ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಮತಾಂತರಗೊಂಡ ಪರಿಶಿಷ್ಟ ಜಾತಿ ವ್ಯಕ್ತಿಗಳ ಸ್ಥಿತಿಗತಿ ಪರಿಶೀಲನೆಗೆ ಕೇಂದ್ರ ಆಯೋಗ